

ಹರೀಶ್ ಮೋಟುಕಾನ ಮಂಗಳೂರು
ಕರೊನಾ ಲಾಕ್‌ಡೌನ್ ತೆರವಾಗಿ ರಫ್ತು-ಆಮದು ವ್ಯವಹಾರ ಚೇತರಿಸಿಕೊಳ್ಳುತ್ತಿರುವಾಗಲೇ ಬಂದರುಗಳಲ್ಲಿ ಉಂಟಾಗಿದ್ದ ಕಂಟೇನರ್ ಸಮಸ್ಯೆ ಸದ್ಯ ಬಗೆಹರಿಯುವ ಲಕ್ಷಣ ಗೋಚರಿಸಿದೆ.
ಕಳೆದ ಮೂರು ತಿಂಗಳುಗಳಿಂದ ಜಾಗತಿಕವಾಗಿ ಕಾಡುತ್ತಿರುವ ಕಂಟೇನರ್ ಕೊರತೆಯ ಪರಿಣಾಮ ಬಂದರು ನಗರಿ ಮಂಗಳೂರಿಗೂ ತಟ್ಟಿದ್ದು, ಕರಾವಳಿಯ ರ್ತು-ಆಮದು ವ್ಯವಹಾರಕ್ಕೆ ಪೆಟ್ಟು ನೀಡಿದೆ. ಕಂಟೇನರ್ ನಿಯಮಿತವಾಗಿ ಸಿಗದೆ ನವ ಮಂಗಳೂರು ಬಂದರು (ಎನ್‌ಎಂಪಿಟಿ) ಮೂಲಕ ನಡೆಯುತ್ತಿರುವ ಕಾರ್ಗೋ ನಿರ್ವಹಣೆಯಲ್ಲಿ ಏರುಪೇರಾಗಿತ್ತು. ಅದರಲ್ಲಿಯೂ, ಕರಾವಳಿಯಿಂದ ಮೀನು, ಗೋಡಂಬಿ, ಕಾಫಿ ಸೇರಿದಂತೆ ಹಲವು ಕಾರ್ಗೋ ಸಾಗಾಟಕ್ಕೆ ಸೂಕ್ತ ಸಮಯದಲ್ಲಿ ಕಂಟೇನರ್ ಸಿಗದೆ ವಿದೇಶದಲ್ಲಿ ಮಾರುಕಟ್ಟೆ ಕೈತಪ್ಪುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಲಾಕ್‌ಡೌನ್ ಕಾಲದಲ್ಲಿ ರ್ತು-ಆಮದು ಸ್ಥಗಿತವಾಗಿ ಬಹುತೇಕ ಕಂಟೇನರ್‌ಗಳು ಒಂದೊಂದು ದೇಶದ ಬಂದರುಗಳಲ್ಲಿ ಬಾಕಿಯಾಗಿತ್ತು. ಈ ಪೈಕಿ ಬಹುಭಾಗ ಚೀನಾದಲ್ಲಿಯೇ ಇತ್ತು. ಆದರೆ, ಲಾಕ್‌ಡೌನ್ ಮುಗಿದ ತತ್‌ಕ್ಷಣವೇ ರ್ತು-ಆಮದು ವಹಿವಾಟು ಚೇತರಿಕೆ ಕಾಣುತ್ತಿದ್ದಂತೆ ಚೀನಾದಲ್ಲಿರುವ ಕಂಟೇನರ್ ಬಳಕೆಗೆ ನೀಡಲಿಲ್ಲ. ಇತರ ದೇಶಗಳಲ್ಲೂ ಕಂಟೇನರ್‌ಗಳು ಬಾಕಿಯಾದವು. ಹೀಗಾಗಿ ಲಭ್ಯ ಕೆಲವೇ ಕಂಟೇನರ್‌ಗಳಿಗೆ ಬೇಡಿಕೆ ಅಧಿಕವಾಯಿತು. ಅಷ್ಟರಲ್ಲೇ ವ್ಯವಹಾರ ಏರಿಕೆಯಾಗಿ ಕಂಟೇನರ್ ಸೂಕ್ತ ಕಾಲದಲ್ಲಿ ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬಾಡಿಗೆ ದರ ದುಪ್ಪಟ್ಟು: ವಿದೇಶದಿಂದ ಯಾವುದೇ ಸರಕನ್ನು ಮಂಗಳೂರಿಗೆ ಹಡಗಿನ ಮೂಲಕ ತರಬೇಕಾದರೆ ಖಾಲಿ ಕಂಟೇನರ್‌ಗಳನ್ನು ಕಂಪನಿಗಳಿಂದ ಬಾಡಿಗೆಗೆ ಪಡೆಯಬೇಕಾಗುತ್ತದೆ. ದೇಶ-ವಿದೇಶದಲ್ಲಿ ಕಾರ್ಗೋ ವಹಿವಾಟು ಏರಿಕೆ ಕಾರಣದಿಂದ ಕಂಟೇನರ್ ಲಭ್ಯತೆ ಕಡಿಮೆಯಾಗಿ ಬಾಡಿಗೆ ದರ ದುಪ್ಪಟ್ಟಾಗಿದೆ. ಇದು ಸರಕು ಸಾಗಾಟ ಮಾಡುವವರಿಗೆ ಸಂಕಷ್ಟ ತಂದಿಟ್ಟಿದೆ.
ಪ್ರಸಕ್ತ ಸರ್ಕಾರಗಳು ಹಾಗೂ ಕಂಟೇನರ್ ಒದಗಿಸುವ ಕಂಪನಿಗಳು ಕೈಗೊಂಡಿರುವ ಪೂರಕ ಕ್ರಮಗಳಿಂದಾಗಿ ಕಂಟೇನರ್ ಕೊರತೆ ನಿಧಾನವಾಗಿ ದೂರವಾಗುತ್ತಿದೆ. ಆದರೂ ಪೂರ್ಣವಾಗಿ ಸಮಸ್ಯೆ ಪರಿಹಾರ ಕಾಣಲು ಹಲವು ಸಮಯ ಬೇಕಾಗಬಹುದು ಎಂದು ಹೇಳಲಾಗುತ್ತಿದೆ.
ಕರಾವಳಿ ಕಾರ್ಗೊ ವಹಿವಾಟಿಗೆ ಹೊಡೆತ: ಗೋಡಂಬಿ, ಮೀನು, ಕಾಫಿ, ಸಕ್ಕರೆ ಸಹಿತ ಆಹಾರ ಉತ್ಪನ್ನ, ಇಂಜಿನಿಯರಿಂಗ್ ಉತ್ಪನ್ನ, ತೈಲೋತ್ಪನ್ನಗಳು, ಕಬ್ಬಿಣದ ಅದಿರಿನ ಉಂಡೆಗಳು, ಗ್ರಾನೈಟ್ ಶಿಲೆಗಳು ಎನ್‌ಎಂಪಿಟಿಯಿಂದ ರಪ್ತು ಆಗುತ್ತದೆ. ಕಚ್ಚಾತೈಲ, ಮರದ ದಿಮ್ಮಿಗಳು, ಘನೀಕೃತ ಪುಡಿಗಳು, ಸಿಮೆಂಟ್, ಕಲ್ಲಿದ್ದಲು, ರಸಗೊಬ್ಬರ, ಅಡುಗೆ ಎಣ್ಣೆ, ರಾಸಾಯನಿಕ ದ್ರವಗಳು, ಗ್ರಾನೈಟ್, ಮೈದಾ, ತೈಲೋತ್ಪನ್ನಗಳ ಆಮದು ನಡೆಯುತ್ತದೆ. ಕಂಟೇನರ್ ಕೊರತೆ ಕಾರಣದಿಂದ ಈ ಎಲ್ಲ ಉತ್ಪನ್ನಗಳ ಸಾಗಾಟಕ್ಕೆ ಸಮಸ್ಯೆಯಾಗಿತ್ತು.
ರಫ್ತು- ಆಮದು ವ್ಯವಹಾರಕ್ಕೆ ಸಂಬಂಧಿಸಿ ಕಂಟೇನರ್ ಕೊರತೆ ಜಾಗತಿಕವಾಗಿ ಕಾಡಿದೆ. ಇದರ ಪರಿಣಾಮ ಕರಾವಳಿ ಭಾಗಕ್ಕೂ ಆಗಿದೆ. ಜತೆಗೆ ಕಂಟೇನರ್ ಬಾಡಿಗೆಯೂ ಎರಡು ಪಟ್ಟು ಏರಿದೆ. ಕೆಲವು ದಿನಗಳಿಂದ ಈ ಸಮಸ್ಯೆ ಬಗೆಹರಿಯುವ ಲಕ್ಷಣ ಗೋಚರಿಸಿದೆ. ಆದರೂ ಸಹಜ ಸ್ಥಿತಿಗೆ ಮರಳಲು ಸಮಯಾವಕಾಶ ಬೇಕಾಗಬಹುದು. ಕಲ್ಬಾವಿ ಪ್ರಕಾಶ್, ಗೋಡಂಬಿ ಉದ್ಯಮಿ