

ಮಂಡ್ಯ: ರವಿವರ್ಮ ಸೇರಿದಂತೆ ಹಲವು ಮಹಾಚಿತ್ರಕಲಾವಿದರು ಬಿಡಿಸಿದ ಕಲಾತ್ಮಕ ಚಿತ್ರಗಳೇ ವ್ಯಕ್ತಿಯ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತದೆ ಎಂದು ಪ್ರಗತಿಪರ ಚಿಂತಕ ಎನ್.ಜಿ.ರಾಮಚಂದ್ರ ಅಭಿಪ್ರಾಯಪಟ್ಟರು.
ನಗರದ ಕಲ್ಲಹಳ್ಳಿ ‘ಪುಟ್ಟ ಹೆಜ್ಜೆ’ ಮನೆಯಲ್ಲಿ ಎಸ್.ವಿ.ಸೃಜನಿ ಅವರ ಬಿಡಿಸಿದ ಚಿತ್ರಗಳ ನಾಲ್ಕನೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೃಜನಿ ಎಂಬ ಪುಟ್ಟ ಬಾಲಕಿ ಬಿಡಿಸಿರುವ ಚಿತ್ರಗಳು ಹೆಸರಿಗೆ ತಕ್ಕಂತೆಯೇ ಸೃಜನ ಬರವಣಿಗೆಯ ಚಿತ್ರಗಳಾಗಿವೆ. ಚಿತ್ರಕಲೆಯ ಮೇಲೆ ಕಣ್ಣುಗಳು ಅರಿವಿಲ್ಲದೇ ಜಾರುತ್ತವೆ, ಉದಾಹರಣೆಗೆ ಮೊನಾಲಿಸಾ, ರವಿವರ್ಮ ಚಿತ್ರಕಲೆಗಳೇ ಸಾಕ್ಷಿಯಾಗಿವೆ. ಇವರ ಚಿತ್ರಗಳನ್ನು ನೋಡಿದರೆ ಸಾಕು ಮನಸ್ಸು ಆಕಾಶದಲ್ಲಿ ಹಕ್ಕಿಯ ರೀತಿ ಹಾರಾಡುತ್ತವೆ ಎಂದು ತಿಳಿಸಿದರು.
ಸಮಕಾಲೀನ ಸಂದರ್ಭದಲ್ಲಿ ಕಲಾಭಿರುಚಿ ಮತ್ತು ಕಲಾಭಿವೃಕ್ತಿ ಕುರಿತು ಚಿತ್ರಕಲಾವಿದ ಎಂ.ಎಲ್.ಸೋಮವರದ ಮಾತನಾಡಿ, ನಾವೆಲ್ಲ ಚಿಕ್ಕವರಿದ್ದಾಗ ಮನೆಯ ಗೋಡೆಗಳ ಮೇಲೆ ತಾಯಂದಿರು ಸುಣ್ಣದ ಗೋಡೆ ಮೇಲೆ ಚಿತ್ರ ಬರೆಯುತ್ತಿದ್ದರು, ರಂಗೋಲಿಗಳು ಇರುತ್ತಿದ್ದವು. ಇಂತಹ ವಾತಾವರಣ ಪ್ರಸ್ತುತದಲ್ಲಿ ಇಲ್ಲದಾಗಿದೆ. ಮಕ್ಕಳಿಗೆ ಇದರ ಸದುಭಿರುಚಿ ಸಿಗುತ್ತಿಲ್ಲ. ಮಕ್ಕಳಿಗೆ ಮುಕ್ತವಾಗಿ ಚಿತ್ರಕಲೆ ಬರೆಯುವ ಅವಕಾಶ ನೀಡಬೇಕು ಎಂದರು.
ಲೇಖಕ ಆರ್.ಜಿ.ಹಳ್ಳಿ ನಾಗರಾಜು, ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಪ್ರಭು ಹರಸೂರು ಇದ್ದರು. ಮೂರು ದಿನಗಳು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಇರಲಿದೆ.