

ನಂಜನಗೂಡು: ಪಟ್ಟಣದ ಸಮೀಪವೇ ಇರುವ ಹಳ್ಳದ ಕೇರಿ ಬಡಾವಣೆಯಲ್ಲಿ ಒಂದು ಕಡೆ ಸೋಲಿಗ ಜನಾಂಗದ ಏಳು ಕುಟುಂಬಗಳ 50ಕ್ಕೂ ಹೆಚ್ಚು ಜನರು ರಸ್ತೆ ಬದಿಯಲ್ಲಿ ಕಳೆದ ಎರಡು ತಲೆಮಾರಿನಿಂದ ವಾಸವಿದ್ದಾರೆ. ಮೂಲಸೌಲಭ್ಯ ವಂಚಿತ ಈ ಕುಟುಂಬಗಳ ಬದುಕು ಎಂಥವರಿಗೂ ಮರುಕ ಹುಟ್ಟಿಸುವಂತಿದೆ.
ಈ ಸೋಲಿಗ ಜನಾಂಗ ವಾಸಿಸುವ ಕಡೆ ಯಾವುದೇ ಮೂಲಸೌಕರ್ಯಗಳಿಲ್ಲ. ಸೌಲಭ್ಯಗಳನ್ನು ಕಲ್ಪಿಸಿಕೊಡುವ ಆಸಕ್ತಿ ಸಂಬಂಧಪಟ್ಟವರಿಗೆ ಇಲ್ಲ ಎಂಬ ಆಕ್ರೋಶ ಕೇಳಿಬಂದಿದೆ. ಈ ಸೋಲಿಗ ಜನಾಂಗ ಇಷ್ಟು ನಿರ್ಲಕ್ಷ್ಯ ಕೊಳಗಾಗಿರುವುದು ವಿಷಾದನೀಯ ಸಂಗತಿಯಾಗಿದೆ.
ಪ್ರಮುಖವಾಗಿ ಮೂಲಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಇಲ್ಲ. ವಿದ್ಯುತ್ ದೀಪಗಳ ಸೌಕರ್ಯವಂತೂ ಇಲ್ಲವೇ ಇಲ್ಲ. ಗುಡಿಸಲು ವಾಸಿಗಳು. ಯಾವುದೇ ಆಶ್ರಯ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಿಕೊಡುವ ಭರವಸೆಯನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನೀಡಿಲ್ಲ. ಇಲ್ಲಿನ ನಿವಾಸಿಗಳ ನೋವುಗಳನ್ನು ಕೇಳುವವರೇ ಇಲ್ಲದಂತಾಗಿದೆ.
ಇಲ್ಲಿನ ನಿವಾಸಿಗಳಿಗೆ ಮುಖ್ಯವಾಗಿ ಕೂಲಿಯೇ ಜೀವನಾಧಾರವಾಗಿದೆ. ಸರ್ಕಾರಿ ಸೌಲಭ್ಯಗಳು ಮಾತ್ರ ಅಲಭ್ಯ ಎಂಬಂತೆ ಆಗಿದೆ. ಈ ಜನರು ಇಲ್ಲಿ ಬಂದು ನೆಲೆಸಿ ಸುಮಾರು ಎರಡು ತಲೆಮಾರುಗಳಾಗಿವೆ. ನಮ್ಮ ನಾಡಿನ ಸಾಹಿತ್ಯ ಸಂಸ್ಕೃತಿಗೆ ಸೋಲಿಗರ ಕೊಡುಗೆಯೂ ಇದೆ ಎಂಬುದು ಹೆಗ್ಗಳಿಕೆ ವಿಚಾರವಾಗಿದೆ. ಜನಪದದಂತೆ ಸೋಲಿಗರ ಹಾಡುಗಳು ಪ್ರಸಿದ್ಧಿ ಪಡೆದ ಕಾವ್ಯ ಪ್ರಕಾರವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ವಿಚಾರದಲ್ಲಿ ಸೋಲಿಗರು ಸಮಾಜದಲ್ಲಿ ತಮ್ಮನ್ನು ಉತ್ಕೃಷ್ಟವಾಗಿ ಗುರುತಿಸಿಕೊಂಡಿದ್ದಾರೆ. ಹೀಗಿರುವಾಗ ಆರ್ಥಿಕವಾಗಿ ಹಿಂದುಳಿದ ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅವರ ಜೀವನ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಡಳಿತ ಕಾರ್ಯಪ್ರವೃತ್ತರಾಗಬೇಕೆಂಬುದು ಅಭಿಪ್ರಾಯವಾಗಿದೆ.
ಜನಾಂಗದ ಹೆಣ್ಣು ಮಕ್ಕಳು ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದ ಪೂಜೆಗೆ ಪ್ರಮುಖವಾಗಿ ಬೇಕಾಗಿರುವ ತುಳಸಿ ಮತ್ತು ಬಿಲ್ವಪತ್ರೆ ಮಾಲೆಗಳನ್ನು ಕಟ್ಟಿಕೊಟ್ಟು ಜೀವನ ನಿರ್ವಹಣೆಗೆ ಆಧಾರವಾಗಿಸಿಕೊಂಡಿದ್ದಾರೆ. ಯಾವುದೇ ಹಿಂದುಳಿದ ಜನಾಂಗ ಶಿಕ್ಷಣ ಹಾಗೂ ಮೂಲ ಸೌಕರ್ಯಗಳಿಂದ ವಂಚಿತವಾಗಬಾರದು ಸರ್ಕಾರಗಳ ಉದ್ದೇಶವಾಗಿದೆ. ಆದರೆ ನಂಜುಂಡೇಶ್ವರ ಸ್ವಾಮಿ ಸನಿಹದಲ್ಲೇ ಇರುವ ಈ ಸೋಲಿಗರ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸದೆ ಇರುವುದು ವಿಪರ್ಯಾಸದ ಸಂಗತಿಯಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ್ಗದ ಹಿತಾಸಕ್ತಿಯಾಗಿ ಹಲವು ಉಚಿತ ಯೋಜನೆಗಳನ್ನು ಜಾರಿಗೊಳಿಸಿರುವುದು ಸ್ವಾಗತಾರ್ಹ. ಆದರೆ ಈ ಗ್ಯಾರಂಟಿ ಯೋಜನೆಗಳ ಪ್ರಯೋಜನ ಈ ನಿವಾಸಿಗಳಿಗೆ ಲಭ್ಯವಾಗಿಲ್ಲ ಎಂಬುದು ಸಂಬಂಧಪಟ್ಟವರ ನಿರ್ಲಕ್ಷ್ಯ ಧೋರಣೆಗೆ ನಿದರ್ಶನವಾಗಿದೆ. ಅಲ್ಲದೆ ವೃದ್ಧಾಪ್ಯ, ವಿಧವಾ ವೇತನ ಸೌಲಭ್ಯವೂ ಸಿಗುತ್ತಿಲ್ಲ. ನಿವಾಸಿಗಳಿಗೆ ಆಧಾರ್ ಕಾರ್ಡ್, ಗುರುತಿನ ಚೀಟಿಗಳನ್ನು ನೀಡಲಾಗಿದೆ. ಆದರೂ ಸವಲತ್ತುಗಳ ಭಾಗ್ಯವಿಲ್ಲದಿರುವುದು ನೋವಿನ ವಿಚಾರವಾಗಿದೆ. ಸರ್ಕಾರದ ನಿವೇಶನ ಹಾಗೂ ಮನೆ ನಿರ್ಮಿಸಿ ಕೊಡುವ ಯೋಜನೆ ಮಹತ್ತರವಾದದ್ದು. ಸ್ವಂತ ನೆಲೆ ಇಲ್ಲದ ಈ ನಿವಾಸಿಗಳಿಗೆ ಸೂರು ಕಲ್ಪಿಸಿಕೊಡುವ ಕೆಲಸ ಜರೂರಾಗಿದೆ. ಈ ನಿವಾಸಿಗಳು ವಾಸಿಸುತ್ತಿರುವುದು ಗುಡಿಸಲಿನಲ್ಲಿ. ಸರ್ಕಾರದ ಉಚಿತ ವಿದ್ಯುತ್ ಯೋಜನೆ, ಗೃಹಲಕ್ಷ್ಮಿ ಯೋಜನೆಗಳ ಸೌಲಭ್ಯ ದೊರಕುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಿವಾಸಿಗಳು ಮತದಾನದ ಹಕ್ಕನ್ನು ಹೊಂದಿದ್ದಾರೆ. ಎಲ್ಲ ದಾಖಲೆಗಳಿದ್ದು ಯಾವುದೇ ಸೌಲಭ್ಯ ಲಭ್ಯವಾಗಿರುವುದು ತಾರತಮ್ಯ ಧೋರಣೆಯಾಗಿದೆ.
ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿವಾಸಿಗಳ ಸಂಕಷ್ಟವನ್ನು ಅರಿತು ಮೂಲಸೌಕರ್ಯಗಳನ್ನು ಕಲ್ಪಿಸುವ ಕ್ರಮಕ್ಕೆ ಮುಂದಾಗಬೇಕಿದೆ. ಜನಪ್ರತಿನಿಧಿಗಳೂ ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವತ್ತ ಗಮನಹರಿಸಬೇಕಿದೆ.