ಘನತ್ಯಾಜ್ಯ ನಿರ್ವಹಣೆಗೆ ಗ್ರಾಪಂಯೊಂದಿಗೆ ಸಹಕರಿಸಿ- ಗ್ರಾಮಸ್ಥರಿಗೆ ಪಿಡಿಒ ಬೀರಲಿಂಗ ಸಲಹೆ

290120 Kampli Grama Sabe
Published on

ಕಂಪ್ಲಿ: ಘನತ್ಯಾಜ್ಯ ನಿರ್ವಹಣೆ ರೂಢಿಸಿಕೊಂಡಲ್ಲಿ ಸ್ವಚ್ಛ ಗ್ರಾಮವನ್ನಾಗಿ ರೂಪಿಸಲು ಸಾಧ್ಯ. ಈ ದಿಸೆಯಲ್ಲಿ ಗ್ರಾಪಂ ಆಡಳಿತದೊಂದಿಗೆ ಗ್ರಾಮಸ್ಥರು ಸಹಕರಿಸಬೇಕು ಎಂದು ನಂ.10ಮುದ್ದಾಪುರ ಪಿಡಿಒ ಬೀರಲಿಂಗ ಸಲಹೆ ನೀಡಿದರು.

ನಂ. 10ಮುದ್ದಾಪುರ ಗ್ರಾಮದ ಹಸಮಾಯಮ್ಮ ದೇವಸ್ಥಾನದ ಆವರಣದಲ್ಲಿ ಬುಧವಾರ ಗ್ರಾಮೀಣ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ, ಘನ ತ್ಯಾಜ್ಯ ನಿರ್ವಹಣೆಯಲ್ಲಿ ಸಮುದಾಯ ಸಹಭಾಗಿತ್ವದ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು.

ಗ್ರಾಮಸ್ಥರು ಬಹಿರ್ದೆಸೆಗೆ ಬಯಲು ಆಶ್ರಯಿಸದೇ ಕಡ್ಡಾಯವಾಗಿ ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಳ್ಳಬೇಕು. ಸ್ಥಳೀಯ ಸಮುದಾಯ ಶೌಚಗೃಹಗಳನ್ನು 10 ದಿನದೊಳಗೆ ತೆರವುಗೊಳಿಸಿ, ಪೇ ಆ್ಯಂಡ್ ಯೂಸ್ ಮಾದರಿಯಲ್ಲಿ ಶೌಚಗೃಹ ನಿರ್ಮಿಸಲಾಗುವುದು. ಮನೆ ಕಸವನ್ನು ವಿಂಗಡಿಸಿ ಗ್ರಾಮ ಆಡಳಿತಕ್ಕೆ ನೀಡುವಲ್ಲಿ ಸ್ಥಳೀಯರು ಸಹಕರಿಸಬೇಕು ಎಂದರು.

ವಿಶೇಷ ಗ್ರಾಮಸಭೆಯಲ್ಲಿ ಘನ ಮತ್ತು ದ್ರವ ತ್ಯಾಜ್ಯಗಳ ನಿರ್ವಹಣೆ, ಶೌಚಗೃಹ ಬಳಕೆ ಕುರಿತು ಸಮಗ್ರ ಮಾಹಿತಿ ನೀಡಲಾಯಿತು. ಕಸ ಸಂಗ್ರಹಿಸುವ ವಾಹನಗಳಿಗೆ ಚಾಲನೆ ನೀಡಲಾಯಿತು. ಮನೆ ಮನೆಗಳಿಗೆ ಕಸದ ಬುಟ್ಟಿ ವಿತರಿಸಲಾಯಿತು. ಘನ ತ್ಯಾಜ್ಯ ನಿರ್ವಹಣೆ ಜಾಗೃತಿಗೆ ರಂಗೋಲಿ, ಭಾಷಣ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಪ್ರಶಸ್ತಿ, ನಗದು ವಿತರಿಸಲಾಯಿತು.

ಗ್ರಾಪಂ ಅಧ್ಯಕ್ಷ ಎಂ.ಎಸ್.ಮಹಾಂತಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವೈ.ಉಮೇಶ್, ಸದಸ್ಯರಾದ ಎ.ತಾಯಣ್ಣ, ಬಿ.ಹೊನ್ನೂರಪ್ಪ, ಜಿಪಂ ಸಂಯೋಜಕ ಮಹಾಂತೇಶ್, ತಾಪಂ ಸಂಯೋಜಕ ನಾಗರಾಜ, ಮಹಿಳಾ ಮೇಲ್ವಿಚಾರಕಿ ಎಲ್.ಡಿ. ನದಾಫ್, ಕಾರ್ಯದರ್ಶಿ ವೀರಭದ್ರಗೌಡ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net