ಕಸ ವಿಲೇವಾರಿ ವಾಹನಗಳ ತಡೆದು ಪ್ರತಿಭಟನೆ

28 hnl2
Published on

ಹೊನ್ನಾಳಿ: ತಾಲೂಕಿನ ಮಾಸಡಿ ಗ್ರಾಮ ಸಮೀಪದಲ್ಲಿ ಸ್ಥಾಪಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಅಸಮರ್ಪಕ ನಿರ್ವಹಣೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಬುಧವಾರ ಮಾರ್ಗಮಧ್ಯ ಪುರಸಭೆ ಕಸ ವಿಲೇವಾರಿ ವಾಹನಗಳನ್ನು ತಡೆದು ಗ್ರಾಮಸ್ಥರು ಪ್ರತಿಭಟನೆ ಮಾಡಿದರು.

ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ್ ಮಾತನಾಡಿ, ಪುರಸಭೆಯಲ್ಲಿನ ಕಸವನ್ನು ಹಸಿ ಕಸ, ಒಣ ಕಸ ಎಂದು ಬೇರ್ಪಡಿಸದೇ ವಾಹನಗಳಲ್ಲಿ ತಂದು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಹೊನ್ನಾಳಿಯಿಂದ ಬರುವ ಕಸದ ಗಾಡಿಗಳಲ್ಲಿ ಕೋಳಿ ತ್ಯಾಜ್ಯ, ಸತ್ತ ಹಂದಿಗಳ ದೇಹ ಹಾಗೂ ಸರ್ಕಾರಿ ಆಸ್ಪತ್ರೆಯ ತ್ಯಾಜ್ಯ ಸೇರಿರುತ್ತದೆ. ಆದರೆ ಇವುಗಳ ಸಂಸ್ಕರಣೆ ಕೆಲಸ ನಡೆಯುತ್ತಿಲ್ಲ ಮತ್ತು ಕಸ ವಿಂಗಡಣೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಸತ್ತ ಪ್ರಾಣಿಗಳ ತ್ಯಾಜ್ಯ ಎಸೆಯುವುದರಿಂದ ನಾಯಿಗಳ ಕಾಟ ಹೆಚ್ಚಾಗಿದೆ. ಇತ್ತೀಚೆಗೆ ಒಂದು ವರ್ಷದ ಮಗು ಸೇರಿ ಅನೇಕ ಜನರಿಗೆ ಹಾಗೂ ಕಟ್ಟಿದ ಕುರಿಗಳಿಗೆ, ದನಕರುಗಳಿಗೆ ನಾಯಿಗಳು ಕಚ್ಚಿವೆ ಎಂದು ದೂರಿದರು.

ಆಸ್ಪತ್ರೆಯಲ್ಲಿನ ತ್ಯಾಜ್ಯವನ್ನು ಸುಡುತ್ತಿರುವುದರಿಂದ ಕೆಟ್ಟ ವಾಸನೆ ಗ್ರಾಮದೊಳಗೆ ಹರಡಿ ಜನರ ಆರೋಗ್ಯ ಹದಗೆಡುತ್ತಿದೆ ಎಂದು ಮುಖಂಡ ಲೋಹಿತ್ ತಿಳಿಸಿದರು. ಕಸದ ವಾಹನಗಳು ಯಥೇಚ್ಛವಾಗಿ ಕಸವನ್ನು ತುಂಬಿಕೊಂಡು ಬರುತ್ತಿದ್ದು, ಗಾಳಿಗೆ ಕಸ ಹಾಗೂ ಸಿರಿಂಜ್​ಗಳನ್ನು ರಸ್ತೆಯುದ್ದಕ್ಕೂ ಬೀಳಿಸಿಕೊಂಡು ಹೋಗುತ್ತಾರೆ ಎಂದು ಕೃಷ್ಣಮೂರ್ತಿ ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಪುರಸಭೆ ಅಧ್ಯಕ್ಷ ಮೈಲಪ್ಪ ಮಾತನಾಡಿ, 20 ದಿನದೊಳಗೆ ಕಸವನ್ನು ಸಂಸ್ಕರಿಸುವ ಕೆಲಸವನ್ನು ಮಾಡಲಾಗುವುದು. ಪೌರಕಾರ್ವಿುಕರ ಸಭೆ ಕರೆದು ರ್ಚಚಿಸಿ ಸಮಸ್ಯೆಗೆ ಪರಿಹಾರ ನೀಡಲಾಗುವುದು. ಈಗಾಗಲೇ ರಸ್ತೆ ಸ್ವಚ್ಛತೆಗೆ ಜೆಸಿಬಿ ವಾಹನವನ್ನು ಕಳುಹಿಸಿ ಕೊಡಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net