ಸೈನಿಕರಿಗೆ, ಮಾಜಿ ಯೋಧರಿಗೆ ದೊರಕಬೇಕಾದ ಗೌರವ ಸಿಕ್ಕುತ್ತಿಲ್ಲ: ಎ.ಎಸ್.ಪೊನ್ನಣ್ಣ

MDK05
Published on

ಮಡಿಕೇರಿ: ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸೈನಿಕರಿಗೆ, ಮಾಜಿ ಸೈನಿಕರಿಗೆ ದೊರಕಬೇಕಾದ ಸೂಕ್ತ ಗೌರವ ಸಿಕ್ಕುತ್ತಿಲ್ಲ ಎಂಬ ನೋವು ಕಾಡುತ್ತದೆ ಎಂದು ವಿಷಾಧಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಯುದ್ಧಕಾಲದಲ್ಲಿ ಮಾತ್ರ ಸೈನಿಕರನ್ನು ಸ್ಮರಿಸುವ ಬದಲಿಗೆ ಸದಾ ದೇಶ ರಕ್ಷಣೆಯ ಪಣ ತೊಟ್ಟಿರುವ ಭಾರತೀಯ ಸೈನಿಕರನ್ನು ಸ್ಮರಿಸುವಂತಾಗಬೇಕು ಎಂದರು.


ಕಾರ್ಗಿಲ್ ವಿಜಯ ದಿನಾಚರಣೆ ಹಿನ್ನಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂನ ಅಮರ್ ಜವಾನ್ ಸ್ಮಾರಕಕ್ಕೆ ಆಯೋಜಿಸಿದ್ದ ಯೋಧ ನಮನ ಕಾರ್ಯಕ್ರಮದಲ್ಲಿ ಪುಪ್ಪನಮನ ಸಲ್ಲಿಸಿ ಮಾತನಾಡಿದರು.


ದೇಶದ ವೀರ ಇತಿಹಾಸದೊಂದಿಗೇ ಸೈನಿಕರ ಕೊಡುಗೆಯನ್ನೂ ಮರೆಯಬಾರದು. ಯೋಧರ ನಾಡು ಎನಿಸಿದ ಕೊಡಗಿನಲ್ಲಿ ಯೋಧಸ್ಮರಣೆಗೆ ಮತ್ತಷ್ಟು ಹೆಚ್ಚಿನ ಪ್ರಚಾರ ದೊರಕಬೇಕು ಎಂದು ಅಭಿಪ್ರಾಯಪಟ್ಟರು.


ಭಾರತದ ಸಂರಕ್ಷಣೆಗೆ ಯೋಧರು ನೀಡಿರುವ ತ್ಯಾಗಬಲಿದಾನವನ್ನು ಎಂದಿಗೂ ಮರೆಯಬಾರದು. ಇತಿಹಾಸದಲ್ಲಿ ಸೈನಿಕರು ದೇಶರಕ್ಷಣೆ ನಿಟ್ಟಿನಲ್ಲಿ ಮಾಡಿದ ಪರಾಕ್ರಮವನ್ನು ಸದಾ ಸ್ಮರಿಸಬೇಕು. ಇತಿಹಾಸ ಮರೆತದ್ದೇ ಆದರೆ ಯಾರೂ ಹೊಸ ಇತಿಹಾಸ ನಿರ್ಮಿಸಲು ಅಸಾಧ್ಯ ಎಂಬ ಡಾ.ಅಂಬೇಡ್ಕರ್ ಮಾತನ್ನು ಸದಾ ಯೋಚನೆಯಲ್ಲಿರಿಸಬೇಕು ಎಂದು ಪೊನ್ನಣ್ಣ ಅಭಿಪ್ರಾಯಪಟ್ಟರು.


ಭಾರತೀಯ ಸೈನಿಕರಿಗೆ ನಾವು ಸದಾ ಗೌರವ ನೀಡಬೇಕಾಗಿದೆ. ಸೈನಿಕನೋರ್ವ ಬಸ್ ಹತ್ತಿದನೆಂದರೆ ಸಹಪ್ರಯಾಣಿಕರು ಆತನ ಲಗೇಜ್ ತಾವೇ ಎತ್ತಿ ಬಸ್ ನಲ್ಲಿರಿಸಿಕೊಂಡು ಆತನಿಗೆ ಆಸನ ನೀಡುವಂತಾಗಬೇಕು. ಸೈನಿಕನ ತ್ಯಾಗದ ಜೀವನಕ್ಕೆ ಇದು ನಮ್ಮೆಲ್ಲರ ಕೊಡುಗೆಯಂತಿರಬೇಕು ಎಂದು ಸಲಹೆ ನೀಡಿದ ಎ.ಎಸ್.ಪೊನ್ನಣ್ಣ, ಕಾರ್ಗಿಲ್‌ನಲ್ಲಿ ಭಾರತದ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಕಾರ್ಗಿಲ್ ಅತಿಕ್ರಮಣಕ್ಕೆ ಮುಂದಾದ ಪಾಕಿಸ್ತಾನದ ಕುತಂತ್ರವನ್ನು ಎಂದಿಗೂ ಮರೆಯಲು ಅಸಾಧ್ಯ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಕೊಡಗು ಮಾಜಿ ಸೈನಿಕರ ಸಂಘದ ಗೌರವ ಕಾರ್ಯದರ್ಶಿ ನಿವತ್ತ ಮೇಜರ್ ಓ.ಎಸ್.ಚಿಂಗಪ್ಪ ಮಾತನಾಡಿ, ಕಾರ್ಗಿಲ್‌ನ್ನು ಬಹಳ ಸಾಹಸದಿಂದ ಮರಳಿ ಪಡೆದ ಭಾರತೀಯ ಸೈನಿಕರ ಪರಾಕ್ರಮವನ್ನು ಪ್ರತೀ ವರ್ಷ ಜು.೨೬ ರಂದು ಕಾರ್ಗಿಲ್ ವಿಜಯ್ ದಿನವನ್ನಾಗಿ ಆಚರಿಸಿ ಯೋಧರಿಗೆ ಗೌರವ ನೀಡಲಾಗುತ್ತಿದೆ. ಕಾರ್ಗಿಲ್ ಸಮರ ಭಾರತಕ್ಕೆ ತಕ್ಕ ಪಾಠವಾಗಿತ್ತು ಎಂದು ಚಿಂಗಪ್ಪ ಹೇಳಿದರು.


ರೋಟರಿ ಸಹಾಯಕ ಗವರ್ನರ್ ದೇವಣಿರ ತಿಲಕ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ರತ್ನಾಕರ್ ರೈ, ರೋಟರಿ ನಿರ್ದೇಶಕ ಅನಿಲ್.ಎಚ್.ಟಿ., ರೋಟರಿ ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾಪೂವಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಸೇರಿದಂತೆ ಅನೇಕರು ಯೋಧ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಿವೃತ್ತ ಯೋಧ ಮಾದಯ್ಯಗೆ ಸನ್ಮಾನ
ಭಾರತೀಯ ಸೇನಾ ಪಡೆಯ ನಿವೃತ್ತ ಯೋಧ, ಪ್ರಸ್ತುತ ಮಡಿಕೇರಿಯ ಸಂಚಾರಿ ಪೊಲೀಸ್ ಆಗಿರುವ ಉಗ್ರಾಣಿ ಮಾದಯ್ಯರವರನ್ನು ಶಾಸಕ ಪೊನ್ನಣ್ಣ ಮತ್ತು ಮೇಜರ್ ಓ.ಎಸ್.ಚಿಂಗಪ್ಪ ಸನ್ಮಾನಿಸಿ ಗೌರವಿಸಿದರು. ಕಾರ್ಗಿಲ್ ವಿಜಯದಿನದ ಹಿನ್ನೆಲೆಯಲ್ಲಿ ದೇಶದ ಸೇನಾಪಡೆಯಲ್ಲಿ ಕರ್ತವ್ಯ ಸಲ್ಲಿಸಿ ನಿವೃತ್ತರಾದ ಯೋಧರನ್ನು ರೋಟರಿ ವತಿಯಿಂದ ಗೌರವಿಸಲಾಗುತ್ತಿದೆ ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net