ತುರ್ತು ಕರೆ ದೇಶ ಸೇವೆಗೆ ತೆರಳಿದ ಸೈನಿಕ: ಹಲ್ಲೇಗೆರೆ ಗ್ರಾಮದ ರಾಘವೇಂದ್ರ ಕರ್ತವ್ಯಕ್ಕೆ ವಾಪಸ್

Soldier who left for national service Mandya
Published on

ಮಂಡ್ಯ: ಮನೆಯ ಗೃಹಪ್ರವೇಶ ಹಿನ್ನೆಲೆಯಲ್ಲಿ ರಜೆ ತೆಗೆದುಕೊಂಡು ಬಂದಿದ್ದ ಸೈನಿಕ, ರಕ್ಷಣಾ ಇಲಾಖೆಯ ಸೈನ್ಯಾಧಿಕಾರಿಗಳ ತುರ್ತು ಕರೆ ಮೇರೆಗೆ ಭಾನುವಾರ ಕರ್ತವ್ಯಕ್ಕೆ ವಾಪಸ್ ತೆರಳಿದರು.

ತಾಲೂಕಿನ ಹಲ್ಲೇಗೆರೆ ಗ್ರಾಮದ ಸುಬ್ಬೇಗೌಡ ಹಾಗೂ ನಿಂಗಮ್ಮ ದಂಪತಿ ಎರಡನೇ ಪುತ್ರ ರಾಘವೇಂದ್ರ ಅವರು ದೇಶ ಸೇವೆಗೆಂದು ವಾಪಸ್ ತೆರಳಿದರು. 2011 ಮಾ.16ರಂದು ಗುಜರಾತ್‌ನ ಗಾಂಧಿಧಾಮ್‌ನಲ್ಲಿ ಕರ್ತವ್ಯಕ್ಕೆಂದು ಮೊದಲ ಬಾರಿಗೆ ನಿಯೋಜನೆಗೊಂಡರು. ಇತ್ತೀಚೆಗೆ ಇವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಅಂತೆಯೇ ಇವರು ಮಂಡ್ಯ ನಗರದ ಮಹಾರಾಜ ಬಡಾವಣೆಯಲ್ಲಿ ನೂತನ ಮನೆ ನಿರ್ಮಾಣ ಮಾಡಿದ್ದು, ಶೀಘ್ರದಲ್ಲಿಯೇ ಗೃಹಪ್ರವೇಶವಿತ್ತು. ಈ ಹಿನ್ನೆಲೆಯಲ್ಲಿ ರಜೆ ಹಾಕಿ ಊರಿಗೆ ಬಂದಿದ್ದರು.

ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿರುವ ಕದನ ತಾರಕಕ್ಕೇರುತ್ತಿದ್ದಂತೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಮಧ್ಯಸ್ತಿಕೆ ವಹಿಸಿ ಕದನ ವಿರಾಮ ಘೋಷಿಸಿದ್ದರು. ಆದರೂ, ಪಾಕಿಸ್ತಾನ ಶನಿವಾರ ರಾತ್ರಿ ಮತ್ತೆ ಅಪ್ರಚೋದಿತ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸೈನಿಕರನ್ನು ನಿಯೋಜಿಸಲು ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್ ಅವರು ನೀಡಿರುವ ಸೂಚನೆ ಮೇರೆಗೆ ರಜೆ ಮೇಲೆ ತೆರಳಿದ್ದ ಸೈನಿಕರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ರಕ್ಷಣಾ ಇಲಾಖೆ ಕಚೇರಿಯಿಂದ ತುರ್ತು ಕರೆ ಬಂದಿದೆ. ಆದ್ದರಿಂದ ರಾಘವೇಂದ್ರ ಕರ್ತವ್ಯಕ್ಕೆ ಮರಳಿದರು. ಇವರನ್ನು ಜಮ್ಮು ಕಾಶ್ಮೀರದ ಗಡಿಭಾಗ ಲಡಾಕ್‌ಗೆ ನಿಯೋಜನೆ ಮಾಡಲಾಗಿದೆ.

ಕರ್ತವ್ಯಕ್ಕೆ ವಾಪಸ್ ತೆರಳಿದ ರಾಘವೇಂದ್ರ ಅವರಿಗೆ ಬಡಾವಣೆ ನಿವಾಸಿಗಳಾದ ಅಶೋಕ್, ಗೋವಿಂದರಾಜು, ಕೃಷ್ಣಪ್ಪ, ರಾಮಲಿಂಗಯ್ಯ, ಮಹದೇವಸ್ವಾಮಿ, ನಟರಾಜು, ಕುಮಾರ್, ಕೆಂಪರಾಜು, ವೆಂಕಟರಾಮು, ರಾಘು, ಕಿರಣ್, ಲತಾ, ಸುನೀತಾ ಸೇರಿದಂತೆ ಹಲವರು ಅಭಿನಂದಿಸಿ, ಶುಭಹಾರೈಸಿ ಕಳುಹಿಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net