

ಬೆಳಗಾವಿ: ಟೆರಿಟೋರಿಯಲ್ ಆರ್ಮಿಯಲ್ಲಿನ ಸೈನಿಕ ಹುದ್ದೆಗಳ ಭರ್ತಿಗೆ ನಗರದ ಮಿಲಿಟರಿ ಸ್ಕೂಲ್ ಆವರಣದಲ್ಲಿ ಆರಂಭವಾಗಿರುವ ನೇಮಕಾತಿಯ ಬಹಿರಂಗ ರ‌್ಯಾಲಿಗೆ ಭಾನುವಾರ ನಿರೀಕ್ಷೆಗೂ ಮೀರಿ ಆಕಾಂಕ್ಷಿಗಳು ಆಗಮಿಸಿದ್ದರಿಂದ ನೂಕುನುಗ್ಗಲಾಗಿ ಕೆಲವು ಅಭ್ಯರ್ಥಿಗಳು ಗಾಯಗೊಂಡು, ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ನ.4ರಿಂದ ರ‌್ಯಾಲಿ ನಡೆಯುತ್ತಿದೆ. ಭಾನುವಾರ ಕರ್ನಾಟಕದ 16 ಜಿಲ್ಲೆಗಳ ಅಭ್ಯರ್ಥಿಗಳಿಗೆ ದಿನ ನಿಗದಿಯಾಗಿತ್ತು. ಒಂದೇ ದಿನ 40 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಆಗಮಿಸಿದ್ದರಿಂದ ಜನದಟ್ಟನೆಯಾಗಿ ನೂಕುನುಗ್ಗಲು ಉಂಟಾಯಿತು. ಯುವಕರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸುವ ಅನಿವಾರ್ಯತೆ ಎದುರಾಯಿತು. ಲಾಠಿ ಬೀಸುವ ವೇಳೆ ನೂಕು ನುಗ್ಗಲಾಗಿದ್ದರಿಂದ ಹುಬ್ಬಳ್ಳಿ ಹಾಗೂ ಗೋಕಾಕ ತಾಲೂಕಿನ ಕೆಲ ಯುವಕರಿಗೆ ಗಾಯಗಳಾಗಿದ್ದರಿಂದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು.
ಪೊಲೀಸರು ಯುವಕರ ದಂಡು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಆರಂಭದಲ್ಲಿ ಸಿಪಿಎಡ್ ಮೈದಾನ ರಸ್ತೆಯಲ್ಲಿ ಕುಳಿತ ಯುವಕರ ಎತ್ತರವನ್ನು ಅಲ್ಲಿಯೇ ಪರೀಕ್ಷಿಸಲಾಯಿತು. ನಂತರ ದೈಹಿಕ ಸಾಮರ್ಥ್ಯ ಪರೀಕ್ಷೆಗಾಗಿ ರಾಷ್ಟ್ರೀಯ ಮಿಲಿಟರಿ ಶಾಲೆ ಮೈದಾನದತ್ತ ಯುವಕರು ಹೋದರು.
1900 ಹುದ್ದೆಗೆ ಲಕ್ಷಾಂತರ ಆಕಾಂಕ್ಷಿಗಳು: ಸೈನಿಕ ಹುದ್ದೆ ಹಾಗೂ ಟ್ರೇಡ್‌ಮನ್, ಕ್ಲರ್ಕ್ ಸೇರಿ ಒಟ್ಟು 1900 ಹುದ್ದೆಗಳಿಗೆ ನೇಮಕಾತಿ ಭರ್ತಿಗೆ ವಿವಿಧ ರಾಜ್ಯಗಳಿಂದ ಸಾವಿರಾರು ಯುವಕರು ಆಗಮಿಸುತ್ತಿದ್ದಾರೆ. ಭಾನುವಾರ ಕರ್ನಾಟಕದ ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಳಗಾವಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ಗದಗ, ಹಾವೇರಿ, ಬಳ್ಳಾರಿ, ಬೀದರ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಮತ್ತು ಯಾದಗಿರಿಯಿಂದ ಸುಮಾರು 40 ಸಾವಿರಕ್ಕೂ ಅಧಿಕ ಯುವಕರು ಪಾಲ್ಗೊಂಡಿದ್ದರು. ನ.4ರಿಂದಲೇ ನೇಮಕಾತಿ ರ‌್ಯಾಲಿ ಆರಂಭವಾಗಿದೆ. ತೆಲಂಗಾಣ, ಗುಜರಾತ, ಗೋವಾ, ಪಾಂಡಿಚರಿ, ದಾದರ ಆ್ಯಂಡ್ ನಗರ ಹಾವೇಲಿ, ದಮನ್ ಆ್ಯಂಡ್ ಡಿಯು, ಲಕ್ಷದ್ವೀಪ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ರಾಜ್ಯಸ್ಥಾನ ರಾಜ್ಯಗಳ ಅಭ್ಯರ್ಥಿಗಳು ಪಾಲ್ಗೊಂಡು ವಿವಿಧ ಪರೀಕ್ಷೆಗಳನ್ನು ಎದುರಿಸಿದ್ದಾರೆ.
ನ.11ರಂದು ಮಹಾರಾಷ್ಟ್ರದ 19 ಜಿಲ್ಲೆಗಳ ಅಭ್ಯರ್ಥಿಗಳಿಗೆ ರ‌್ಯಾಲಿ ನಡೆಯಲಿದೆ. 50 ಸಾವಿರಕ್ಕೂ ಅಧಿಕ ಯುವಕರು ಭಾಗಿಯಾಗಲಿದ್ದಾರೆಂದು ಅಂದಾಜಿಸಲಾಗಿದೆ. ನ. 12ರಂದು ಮತ್ತೆ ಮಹಾರಾಷ್ಟ್ರದ ಇನ್ನುಳಿದ 18 ಜಿಲ್ಲೆಗಳ ಯುವಕರಿಗೆ ರ‌್ಯಾಲಿಯಲ್ಲಿ ಭಾಗಿಯಾಗುವುದಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ನೇಮಕಾತಿ ರ‌್ಯಾಲಿಯಲ್ಲಿ ದೈಹಿಕ ಪರೀಕ್ಷೆ ಸೇರಿ ವಿವಿಧ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನ. 13ರಂದು ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಬಳಿಕ ಆಯ್ಕೆ ಅಭ್ಯರ್ಥಿಗಳ ಪಟ್ಟಿ ತಯಾರಿಸುವ ಪ್ರಕ್ರಿಯೆ ನಡೆಯಲಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಟೆರಿಟೋರಿಯಲ್ ಆರ್ಮಿಯಲ್ಲಿನ ಹುದ್ದೆಗಳ ನೇಮಕಾತಿ ರ‌್ಯಾಲಿಗೆ ದೇಶದ ವಿವಿಧ ರಾಜ್ಯಗಳಿಂದ ಯುವಕರು ಆಗಮಿಸುತ್ತಿದ್ದರಿಂದ ಕುಂದಾನಗರಿ ಬೆಳಗಾವಿಯ ಪ್ರಮುಖ ರಸ್ತೆಗಳಲ್ಲಿ ಹೆಗಲಿಗೆ ಬ್ಯಾಗ್ ಹಾಕಿದ ಯುವಕರು ಕಾಣಸಿಗುತ್ತಿದ್ದಾರೆ. ಆಯಕಟ್ಟಿನ ಹೋಟೆಲ್‌ಗಳಲ್ಲಿ ಯುವಕರ ದಂಡೇ ನೆರೆದಿರುತ್ತದೆ. ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ, ಫುಟ್‌ಪಾತ್‌ಗಳಲ್ಲಿ ಯುವಕರು ರಾತ್ರಿ ಮಲಗಿ, ಬೆಳಗ್ಗೆ ಎದ್ದು ನೇಮಕಾತಿ ನಡೆಯುತ್ತಿರುವ ಮೈದಾನದತ್ತ ತೆರಳುತ್ತಿದ್ದಾರೆ. ಬಹಳಷ್ಟು ಯುವಕರು ರಾತ್ರಿನೇ ಮೈದಾನಕ್ಕೆ ಹೋಗಿ ತಂಗುತ್ತಿದ್ದಾರೆ. ಜ.12ರವರೆಗೆ ರ‌್ಯಾಲಿ ನಡೆಯಲಿದೆ.