ಹೃದಯಾಘಾತದಿಂದ ಯೋಧ ಸಾವು

IMG-20240914-WA0080
Published on

ಹೊಳೆನರಸೀಪುರ: ಪಟ್ಟಣದ ಸೀತಾವಿಲಾಸ ರಸ್ತೆಯ ನಿವಾಸಿ ಸಿಆರ್‌ಪಿಎಫ್ ಯೋಧ ಎಂ.ಆರ್. ರವಿಶಂಕರ್(39) ಹೃದಯಾಘಾತದಿಂದ ನಿಧನರಾದರು. ಸಾಲಿಗ್ರಾಮ ತಾಲೂಕಿನ ಮೂಡಲಬೀಡು ಗ್ರಾಮದ ರಾಜೇಗೌಡರ ಮಗನಾದ ರವಿಶಂಕರ್ ಜಮ್ಮುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಅರಸೀಕೆರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ ಯೋಧರೊಬ್ಬರ ರಿಪೋರ್ಟ್ ಪಡೆಯಲು ಆಗಮಿಸಿದ್ದರು ಎನ್ನಲಾಗಿದೆ.


ಶುಕ್ರವಾರ ಸಂಜೆ 6.30ರಲ್ಲಿ ಸುಸ್ತು ಹಾಗೂ ಉಸಿರಾಟದ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ್ದರು. ವೈದ್ಯರು ಯೋಧರ ಸಮಸ್ಯೆಯನ್ನು ತಿಳಿದು ಚಿಕಿತ್ಸೆ ನೀಡಿ, ಮಾತ್ರೆ ಕೊಟ್ಟು ಕಳುಹಿಸಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ರಾತ್ರಿ 9 ಗಂಟೆಯಲ್ಲಿ ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ರವಿಶಂಕರ್ ಅವರನ್ನು ಆಸ್ಪತ್ರೆಗೆ ಕರೆತಂದಾಗ ಪರೀಕ್ಷಿಸಿದ ವೈದ್ಯರು ಯೋಧ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.


ಕೆ.ಆರ್.ನಗರ ಶಾಸಕ ರವಿಶಂಕರ್ ಶವಾಗಾರದಲ್ಲಿ ಯೋಧ ರವಿಶಂಕರ್ ಅವರ ಅಂತಿಮ ದರ್ಶನ ಪಡೆದರು. ಮೃತರ ಪತ್ನಿ ನಂದಿನಿ ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ತಾಲೂಕು ಆಡಳಿತ ಪರವಾಗಿ ಶಿರಸ್ತೇದಾರ್ ಲೋಕೇಶ್, ಪಿಎಸ್‌ಐ ಅಭಿಜಿತ್ ಅವರು ಯೋಧ ರವಿಶಂಕರ್ ಅವರ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net