ಯೋಧರು ನಮ್ಮ ಕಾಯೋ ದೇವರು

dj bms yodha
Published on

ಭೀಮಸಮುದ್ರ: ತ್ಯಾಗ, ಬಲಿದಾನ, ಸರಳ, ದೇಶಭಕ್ತಿಯ ಸಂಕೇತವಾಗಿರುವ ಯೋಧರನ್ನು ಕುರಿತು ಇಡೀ ದೇಶವೇ ಸ್ಮರಿಸಬೇಕು ಎಂದು ಬೆಂಗಳೂರಿನ ಡಿಆರ್‌ಡಿಒ ಶಿಕ್ಷಕಿ ಎಂ.ಆರ್.ಆಶಾರಾಣಿ ಅಭಿಪ್ರಾಯಪಟ್ಟರು.

ನಿವೃತ್ತಿ ಬಳಿಕ ಕಾಟಿಹಳ್ಳಿ ಗ್ರಾಮಕ್ಕೆ ಭಾನುವಾರ ಆಗಮಿಸಿದ ಯೋಧ ಎಂ.ಆರ್.ಅಜಯ್‌ಕುಮಾರ್ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ ಬಳಿಕ ಏರ್ಪಡಿಸಿದ್ದ ಗೌರವ ಸಮರ್ಪಣೆ ಸಭೆಯಲ್ಲಿ ಮಾತನಾಡಿದರು.

ಯೋಧರು ನಮ್ಮ ಕಾಯೋ ನಿಜವಾದ ದೇವರು ಎಂಬ ಅರಿವು ನಮ್ಮಲ್ಲಿ ಇರಬೇಕು. ಒಬ್ಬ ವ್ಯಕ್ತಿ ವೀರ ಸೈನಿಕನಾಗಲು ಅದ್ಭುತ ಗುಣಗಳನ್ನೇ ಹೊಂದಿರಬೇಕು.

ಸೈನಿಕನ ಜೀವನವು ನಮ್ಮ ಯುವಕರಿಗೆ ಸ್ಫೂರ್ತಿ ಆಗಬೇಕು. ಯೋಧ ರಾಷ್ಟ್ರದ ಹೆಮ್ಮೆ. ಅವರು ತಾಯಿನಾಡಿನ ಗೌರವವನ್ನು ಅವರ ಜೀವನ ಮತ್ತು ರಕ್ತದೊಂದಿಗೆ ರಕ್ಷಿಸುತ್ತಾರೆ ಎಂದು ಬಣ್ಣಿಸಿದರು.

ಶತ್ರು ರಾಷ್ಟ್ರಗಳ ವಿರುದ್ಧ ಗಡಿಪ್ರದೇಶದಲ್ಲಿ ಜೀವ ಪಣಕ್ಕಿಟ್ಟು ಹೋರಾಟ ನಡೆಸುವ ಸೈನಿಕರು, ದೇಶದೊಳಗೆ ಪ್ರಕೃತಿ ವಿಕೋಪ, ತುರ್ತು ಸಂದರ್ಭದಲ್ಲಿ ಜನರ ರಕ್ಷಣೆಗೆ ಮುಂದಾಗುತ್ತಾರೆ.

ಶಿಸ್ತು, ಧೈರ್ಯ, ಶೌರ್ಯ, ನಿಷ್ಠೆಯೇ ಯೋಧರ ಜೀವನ ಆಗಿರುತ್ತದೆ. ಈ ಗುಣಗಳನ್ನು ಪ್ರತಿ ವ್ಯಕ್ತಿ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ದೇಶಭಕ್ತಿ ಆಗಲಿದೆ ಎಂದರು.

ಗೌರವ ಸ್ವೀಕರಿಸಿ ಮಾತನಾಡಿದ ಯೋಧ ಎಂ.ಆರ್.ಅಜಯ್ಕುಮಾರ್, 24 ವರ್ಷಗಳ ಕಾಲ ಗಡಿಭಾಗದಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಬಳಿಕ ಹುಟ್ಟೂರಿಗೆ ಆಗಮಿಸಿದಾಗ ಜನ ತೋರಿದ ಪ್ರೀತಿಗೆ ಋಣಿ ಆಗಿರುತ್ತೇನೆ.

ಮುಂದಿನ ಬದುಕನ್ನು ಪರಿಸರ ರಕ್ಷಣೆ, ಶಿಕ್ಷಣ ಕ್ಷೇತ್ರದ ಪ್ರಗತಿ ಹೀಗೆ ವಿವಿಧ ರೀತಿ ಸೇವೆ ಸಲ್ಲಿಸಲು ಮೀಸಲಿಡುವೆ ಎಂದು ಭರವಸೆ ನೀಡಿದರು.

ಹಿಂದು-ಮುಸ್ಲಿಂ-ಕ್ರೈಸ್ತ ಎಲ್ಲರೂ ಸಹೋದರರ ರೀತಿ ಜೀವನ ನಡೆಸಬೇಕು. ಜಾತಿ-ಧರ್ಮ ಭೇದ ತೊರೆದು ನಾಡಿನ ಅಭಿವೃದ್ಧಿಗೆ ಶ್ರಮಿಸಬೇಕು. ಈ ಮೂಲಕವೂ ದೇಶ ಸೇವೆ ಸಲ್ಲಿಸಬಹುದು ಎಂದರು.

ಗ್ರಾಪಂ ಅಧ್ಯಕ್ಷೆ ತಮಕಿನ್ ಬಾನು ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಚಂದ್ರಕುಮಾರ್, ಮಮತಾ, ಗ್ರಾಮಸ್ಥರಾದ ಕುಮಾರಣ್ಣ, ಕರಿಯಪ್ಪ, ಪಿಡಿಒ ದೀಪಾ, ಶಿಕ್ಷಕರಾದ ಗೀತಮ್ಮ, ಬಿ.ಎಚ್.ತಿಪ್ಪೇಸ್ವಾಮಿ, ಲಾವಣ್ಯಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net