

ಬಾದಾಮಿ : ತಮ್ಮ ಚಿಕ್ಕಪ್ಪನ ಮಕ್ಕಳ ಮದುವೆಗೆ ಬಂದಿದ್ದ ಬಿಎಸ್‌ಎ್ ಯೋಧನೊಬ್ಬ ಮಾನಸಿಕವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಮಲ್ಲಯ್ಯ ರೇಷ್ಮಿ (39) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕಳೆದ 20 ವರ್ಷಗಳಿಂದ ಬಿಎಸ್‌ಎ್ ಯೋಧನಾಗಿ ಕೆಲಸ ಮಾಡುತ್ತಿದ್ದ ಇವರು ಸದ್ಯ ಮಿಜೋರಾಮ್ ರಾಜ್ಯದ ಐಜ್ವಾಲ್ ಬಟಾಲಿಯನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ತಮ್ಮ ಚಿಕ್ಕಪ್ಪನ ಮಕ್ಕಳ ಮದುವೆ ಕಾರಣಕ್ಕೆ 20 ದಿನಗಳ ಹಿಂದೆ ರಜೆ ಪಡೆದು ತಮ್ಮ ಗ್ರಾಮಕ್ಕೆ ಆಗಮಿಸಿದ್ದರು. ಮೃತ ಯೋಧನಿಗೆ ಇಬ್ಬರು ಪುತ್ರಿಯರಾದ ಶೈಲಾ (16), ಸಿಂಧೂ (11) ಮತ್ತು ಪತ್ನಿ ಶಾಂತಮ್ಮ ಇದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಯೋಧನ ಪತ್ನಿ ಶಾಂತಮ್ಮ ದೂರು ನೀಡಿದ್ದು, ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಯೋಧನ ನಿಧನಕ್ಕೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಗುರುವಾರ ಸಂಜೆ ಸ್ವಗ್ರಾಮ ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.