

ಮಂಡ್ಯ: ಭಾರತೀಯ ಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತಾಯ್ನಡಿಗೆ ಆಗಮಿಸಿದ ತಾಲೂಕಿನ ಮಾದೇಗೌಡನಕೊಪ್ಪಲು ಗ್ರಾಮದ ಭಾನುಪ್ರಕಾಶ್ ಅವರಿಗೆ ನಗರದಲ್ಲಿ ಅಭೂತಪೂರ್ವ ಸ್ವಾಗತ ನೀಡಲಾಯಿತು.
ರೈಲ್ವೆ ನಿಲ್ದಾಣದ ಬಳಿ ಆಗಮಿಸಿದ ಭಾನುಪ್ರಕಾಶ್ ಅವರನ್ನು ಕುಟುಂಬದವರು ಮತ್ತು ನಾಗರಿಕರು, ವಿವಿಧ ಸಂಘಟನೆಗಳ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿ ಸಂಭ್ರಮಿಸಿದರು. ಈ ಕ್ಷಣಕ್ಕೆ ಆಟೋ ಚಾಲಕರು ಸಾಥ್ ನೀಡಿದರು.
ಜೀವಧಾರೆ ಟ್ರಸ್ಟ್ ಅಧ್ಯಕ್ಷ ಎಸ್.ಎಂ.ನಟರಾಜು ಮಾತನಾಡಿ, ಗಡಿಯಲ್ಲಿ ಸೈನಿಕರು ತಮ್ಮ ಪ್ರಾಣ ಒತ್ತೆಯಿಟ್ಟು ದೇಶ ಕಾಯುತ್ತಿದ್ದಾರೆ. ಇದರಿಂದಾಗಿ ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ನಮ್ಮ ಜಿಲ್ಲೆಯ ಹೆಮ್ಮೆಯ ಪುತ್ರ ಭಾನುಪ್ರಕಾಶ್ ಅವರು ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ವಾಪಸ್ ಬಂದಿರುವುದು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಸದಸ್ಯ ರಾಮಲಿಂಗಯ್ಯ, ಮುಖಂಡರಾದ ರಂಜು, ಕುಶಾಲ್, ಸೋಮಣ್ಣ, ಜವರೇಗೌಡ, ನಾಗೇಶ್, ಮಂಜು, ಯೋಗೇಶ್ ಇದ್ದರು. ಇದೇ ವೇಳೆ ಆಟೋ ಮೂಲಕ ಮೆರವಣಿಗೆ ನಡೆಸಿದ ಅಭಿಮಾನಿಗಳು, ಪಟಾಕಿ ಸಿಡಿಸಿ ಸಿಹಿ ಹಂಚಿದರು. ಹೆದ್ದಾರಿಯಲ್ಲಿ ಭಾರತ ಮಾತಾಕೀ ಜೈ ಎಂದು ಘೋಷಣೆ ಮೊಳಗಿಸಿ, ಮಾದೇಗೌಡನಕೊಪ್ಪಲಿಗೆ ಕರೆದುಕೊಂಡು ಹೋಗಿ ಬಿಟ್ಟು ಬರಲಾಯಿತು.