

ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ
ಸರ್ಕಾರಿ ಕೆಲಸ ಎಂದರೆ ಮುಗಿಬೀಳುವ ಇಂದಿನ ಕಾಲದಲ್ಲಿ ವ್ಯವಸಾಯ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇವರೆಲ್ಲರ ನಡುವೆ ನೈಸರ್ಗಿಕ ಬೇಸಾಯದ ಮೂಲಕ ವಿಭಿನ್ನವಾಗಿ ಕಾಣಿಸುತ್ತಾರೆ ಮಾಗಡಿ ತಾಲೂಕಿನ ಮಾಡಬಾಳ್ ಹೋಬಳಿ ಅಜ್ಜನಹಳ್ಳಿ ಸಿದ್ದೇಶ್ವರ ಕಾಲನಿಯ ನಿವೃತ್ತ ಯೋಧ ಗಂಗಯ್ಯ.
ಮಾಗಡಿಯಲ್ಲಿ ಬಿಎ ಪದವಿ ಪಡೆದ ಗಂಗಯ್ಯ 20 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಂತರ 1 ವರ್ಷ ಬೆಂಗಳೂರಿನ ಉಪ್ಪಾರಪೇಟೆ ಠಾಣೆಯಲ್ಲಿ ಪಿಎಸ್‌ಐ ಆಗಿ ಕಾರ್ಯನಿರ್ವಹಿಸಿದ್ದರು. ನಂತರ ಕೆಲಸಕ್ಕೆ ರಾಜೀನಾಮೆ ನೀಡಿ ಬಿಇಎಂಎಲ್‌ನಲ್ಲಿ 20 ವರ್ಷ ಭದ್ರತಾ ಅಧಿಕಾರಿಯಾಗಿದ್ದರು. ನಿವೃತ್ತಿ ನಂತರ ಪೂರ್ವಿಕರ 2 ಎಕರೆ ಜಮೀನಿನಲ್ಲಿ ಪತ್ನಿ ಲಕ್ಷ್ಮಿದೇವಿಯೊಂದಿಗೆ ನೈಸರ್ಗಿಕ ಕೃಷಿ ಮಾಡುವ ಮೂಲಕ ಸಾವಯವ ಬೇಸಾಯದಲ್ಲಿ ಮಾದರಿ ರೈತರಾಗಿದ್ದಾರೆ. ಜಿಕೆವಿಕೆ, ಕೆವಿಕೆ ಹಾಗೂ ತೋಟಗಾರಿಕೆ, ಕೃಷಿ ಇಲಾಖೆ ಮಾರ್ಗದರ್ಶನ ಪಡೆದು ತರಕಾರಿ, ಹೂವು, ಹಣ್ಣು ಬೆಳೆದು ಯಶಸ್ವಿಯಾಗಿದ್ದಾರೆ.
ಜಾನುವಾರು ಸಾಕಣೆ, ತರಕಾರಿ, ತೆಂಗು, ಮಾವು
ಕೃಷಿ, ಕುರಿ, ಕೋಳಿ, ಹಸು, ಮೇಕೆ ಸಾಕಣೆ ಮಾಡುವ ಗಂಗಯ್ಯ ಕೃಷಿಗಾಗಿ ಎರೆಹುಳು ಹಾಗೂ ಜೀವಾಮೃತ ಘಟಕಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಡಕೆ, ತೆಂಗು, ಮಾವು, ತೇಗ, ಸಿಲ್ವರ್, ಗಂಧದ ಮರಗಳನ್ನು ಬೆಳೆದಿದ್ದಾರೆ. ತೊಗರಿ, ಬದನೆ, ಟೊಮ್ಯಾಟೊ, ಸಾಂಬಾರು ಸೌತೆ, ಸೌತೆಕಾಯಿ, ಮೆಣಸಿನಕಾಯಿ, ನುಗ್ಗೆಕಾಯಿ. ಕರಿಬೇವು ಹೀಗೆ... ತರಕಾರಿ ಬೆಳೆಯುವುದರಲ್ಲಿಯೂ ಸೈ ಎನಿಸಿದ್ದಾರೆ.
ತರಹೇವಾರಿ ಹೂವು, ಹಣ್ಣು ಜತೆಗೆ ಸಾಂಬಾರ ಪದಾರ್ಥ ಕನಕಾಂಬರ, ಚೆಂಡು ಹೂವು, ಬಸವನ ಹೂವು, ನಂದಿಬಟ್ಟಲು ಸೇರಿ ವಿವಿಧ ಹೂವುಗಳನ್ನು ಇವರ ತೋಟದಲ್ಲಿ ಕಾಣಬಹುದು. ಜತೆಗೆ ವೀಳ್ಯದೆಲೆ, ಚಕ್ಕೆ, ಲವಂಗ, ಏಲಕ್ಕಿ, ಮೆಣಸು, ಪುನರ್‌ಪುಳಿ, ವಾಟರ್ ಆಪಲ್, ಕಿತ್ತಳೆ, ಬೆಣ್ಣೆ ಹಣ್ಣು, ಅಂಜೂರ, ಪಪ್ಪಾಯ, ಸಪೋಟಾ, ಬೆಟ್ಟದ ನೆಲ್ಲಿ, ವೈನ್ ಹಣ್ಣಿನ ಗಿಡ, ಹೈಬ್ರಿಡ್ ನೆಲ್ಲಿ, ಸೀಬೆ, ಹಲಸು, ಚಕ್ಕೋತ, ದಾಳಿಂಬೆ, ನೇರಳೆ, ಚೈನೀಸ್ ಕಿತ್ತಳೆ, ಸೀತಾಫಲಗಳನ್ನು ಗಂಗಯ್ಯ ಬೆಳೆದಿದ್ದಾರೆ.
ತಾವು ಬೆಳೆಯುವ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಸದೆ ಸಮಗ್ರ ಕೃಷಿ ಪದ್ಧತಿಯಲ್ಲಿ ಕಾಂಪೋಸ್ಟ್ ಗೊಬ್ಬರ, ಮೇಕೆ, ಕುರಿ, ಹಸು ಗೊಬ್ಬರ, ಹಸಿರೆಲೆ ಗೊಬ್ಬರದಿಂದ ತಯಾರಿಸಿ ಬಳಸುತ್ತಾರೆ. ಎಲ್ಲ ಬೆಳೆಗಳಿಗೆ ಸಾವಯವ ಗೊಬ್ಬರ ಬಳಸುವ ಇವರು ಸ್ವತಃ ಕೀಟ ನಿರ್ವಹಣೆಯನ್ನೂ ಮಾಡುತ್ತಾರೆ. ಗಂಗಯ್ಯ ಅವರು ಬೆಳೆಯುವ ತರಕಾರಿ, ಹೂವು, ಹಣ್ಣುಗಳಿಗೆ ಸ್ಥಳೀಯವಾಗಿ ಭಾರಿ ಬೇಡಿಕೆಯಿದ್ದು, ಸೀಮಿತ ಬೆಳೆಗಳನ್ನು ಮಾತ್ರ ಮಾರಾಟ ಮಾಡುತ್ತಾರೆ.
ಉಳಿದಂತೆ ಬೆಂಗಳೂರಿನಲ್ಲಿರುವ ಕುಟುಂಬದವರು, ಬಂಧು ಬಾಂಧವರು, ಸ್ನೇಹಿತರು ಹಾಗೂ ಗ್ರಾಮದಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಉಚಿತವಾಗಿ ನೀಡುತ್ತಾರೆ. ಪಪ್ಪಾಯ, ಸೀಬೆ ಹಣ್ಣು, ನಾಟಿ ಶುಂಠಿ, ಸಪೋಟ, ಚಕ್ಕೋತ ಹಣ್ಣುಗಳನ್ನು ಕೀಳದೆ ತೋಟಕ್ಕೆ ಬಂದವರಿಗೆ ನೀಡಲು ಹಾಗೂ ಪಶು ಪಕ್ಷಿಗಳಿಗೆಂದು ಮೀಸಲಿಡುವುದು ವಿಶೇಷವಾಗಿದೆ. ಲವ್ ಬರ್ಡ್ಸ್, ಪಾರಿವಾಳ, ನೀರು ಕೊಕ್ಕರೆ, ಹಸಿರು ಗಿಳಿ ಸೇರಿ ಹಲವಾರು ಬಗೆಯ ಪಕ್ಷಿಗಳನ್ನು ಸಾಕಿರುವ ಗಂಗಯ್ಯ ಅವರ ತೋಟದಲ್ಲಿ ಹಕ್ಕಿಗಳ ಕಲರವ ಖುಷಿ ನೀಡುತ್ತದೆ.
2 ಎಕರೆ ಜಮೀನಿಗೆ 2 ಕೊಳವೆಬಾವಿಗಳನ್ನು ಕೊರೆಸಿ ಹವಾಮಾನಕ್ಕೆ ಅನುಗುಣವಾಗಿ ಹನಿ ನೀರಾವರಿ ಮೂಲಕ ಎಲ್ಲ ಬೆಳೆಗಳಿಗೂ ಅಗತ್ಯಕ್ಕೆ ತಕ್ಕಂತೆ ನೀರು ಹರಿಸುತ್ತಾರೆ. ಖುದ್ದು ಗಂಗಯ್ಯ ಅವರೇ ಪವರ್ ಟಿಲ್ಲರ್ ಬಳಸಿ ಭೂಮಿ ಉಳುಮೆ ಮಾಡುತ್ತಾರೆ. ಅವಶ್ಯಕತೆ ಇದ್ದಾಗ ಮಾತ್ರ ಕಾರ್ಮಿಕರನ್ನು ಬಳಸಿಕೊಳ್ಳುತ್ತಾರೆ. ಉಳಿದಂತೆ ಪತ್ನಿ ಲಕ್ಷ್ಮೀದೇವಿ ಪತಿಗೆ ಸಾಥ್ ನೀಡುತ್ತಾರೆ.
ತಾವು ಬೆಳೆಯುವ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ 5-6 ಲಕ್ಷ ರೂ. ಆದಾಯಗಳಿಸಬಹುದು ಎನ್ನುವ ಗಂಗಯ್ಯ ಅವರು ಬಹುತೇಕ ಉತ್ಪನ್ನಗಳನ್ನು ಉಚಿತವಾಗಿ ನೀಡುವುದರಿಂದ 3 ಲಕ್ಷ ರೂ. ಆದಾಯ ಬರುತ್ತದೆ ಎನ್ನುತ್ತಾರೆ.
ಸಂಪರ್ಕ ವಿವರಇವರಿಂದ ಕೃಷಿ ಮಾಹಿತಿ ಪಡೆಯಲು ಪ್ರತಿ ದಿನ ನೂರಾರು ಮಂದಿ ಇವರ ತೋಟಕ್ಕೆ ಭೇಟಿ ನೀಡುತ್ತಾರೆ. ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮೊಬೈಲ್ ಸಂಖ್ಯೆ 9611907630ಕ್ಕೆ ಕರೆಮಾಡಿ ಇವರನ್ನು ಸಂಪರ್ಕಿಸಬಹುದಾಗಿದೆ.
ಪೂರ್ವಿಕರ ಜಮೀನನ್ನು ಮಾರಾಟ ಮಾಡದೆ ನಿವೃತ್ತಿ ನಂತರ ಕೃಷಿಯಲ್ಲಿ ತೊಡಗಿ ಮುಂದಿನ ತಲೆಮಾರಿಗೆ ಕೃಷಿ ಪರಿಚಯ ಮಾಡಲಾಗುತ್ತಿದೆ. ಯುವಕರು ಕೃಷಿಯತ್ತ ಒಲವು ತೋರಿದರೆ ಯಶಸ್ಸು ಸಾಧ್ಯ.
ಗಂಗಯ್ಯ
ನಿವೃತ್ತಿ ಬಳಿಕ ಕೃಷಿಯಲ್ಲಿ ತೊಡಗಿ ಕೃಷಿಯಲ್ಲಿ ಸಾಧನೆ ಮಾಡಿ ಬೇರೆಯವರಿಗೆ ಮಾದರಿಯಾಗಿರುವುದನ್ನು ನೋಡಿದರೆ ಸಂತೋಷವಾಗುತ್ತದೆ. ಇಂದಿನ ಯುವ ಪೀಳಿಗೆ ಇಂತಹ ಕೆಲಸ ಮಾಡಿದರೆ ಕೃಷಿಗೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಯುವಕರಿಗೆ ತಾಳ್ಮೆ, ಆಸಕ್ತಿ ಇದ್ದರೆ ಕೃಷಿಯಲ್ಲಿ ಸಾಧನೆ ಸುಲಭ.
ಜಿ.ಆರ್. ರಾಮಚಂದ್ರು, ಪ್ರಗತಿಪರ ರೈತ, ಗವಿನಾಗಮಂಗಲ
==============
ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಾ ತಮ್ಮ ಮೂರು ಮಂದಿ ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ನೀಡಿದ್ದಾರೆ. ಹಿರಿಯ ಮಗಳು ಡಾ.ಲೀನಾ ಗೌಡ ಹೆಬ್ಬಾಳದ ಪಶುವೈದ್ಯಕೀಯ ವಿಶ್ವವಿದ್ಯಾನಿಲಯದಲ್ಲಿ ಪ್ರೊೆಸರ್ ಹಾಗಿ ಕಾರ್ಯನಿರ್ವಹಿಸಿದರೆ, ಎರಡನೇ ಮಗಳು ಮಮತಾ ಬಿಇ ವ್ಯಾಸಂಗ ಮಾಡಿ ಖಾಸಗಿ ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೆಶಕರಾಗಿದ್ದಾರೆ, ಪುತ್ರ ಮಂಜುನಾಥ್ ಬಿಇ ವ್ಯಾಸಂಗ ಮಾಡಿ ಪ್ರತಿಷ್ಠಿತ ಕಂಪನಿಯಲ್ಲಿ ನೌಕರರಾಗಿದ್ದಾರೆ.
ರೈತ ಮತ್ತು ಸೈನಿಕ ಈ ದೇಶದ ಬೆನ್ನೆಲುಬಾಗಿದ್ದು ಈ ಎರಡು ಕ್ಷೇತ್ರದಲ್ಲಿ ಸೇವೆ ಮತ್ತು ಸಾಧನೆ ಮಾಡಿರುವ ಇವರನ್ನು ಸ್ಥಳಿಯ ಆಡಳಿತ ಗುರುತಿಸಿ ಪ್ರಶಸ್ತಿ ನೀಡುವಲ್ಲಿ ಮೈ ಮರೆತಿದೆ. ಇನ್ನಾದರೂ ಇಂಥ ಮಾದರಿ ರೈತ, ನಿವೃತ್ತ ಸೈನಿಕರನ್ನು ಗುರುತಿಸಿ ಪ್ರಶಸ್ತಿ ನೀಡಿದರೆ ಪ್ರಶಸ್ತಿಗಳಿಗೆ ಬೆಲೆ ಬರುತ್ತದೆ ಎಂಬುದು ಅನ್ನದಾತನ ಒತ್ತಾಸೆಯಾಗಿದೆ.