

ಚಿಕ್ಕೋಡಿ: ಕರೋಶಿ ಗ್ರಾಮ ಪಂಚಾಯಿತಿಗೆ ದೊರೆತ ಗಾಂಧಿ ಗ್ರಾಮ ಪುರಸ್ಕಾರದ 5 ಲಕ್ಷ ರೂ.ಗಳ ಅನುದಾನವನ್ನು ಪಂಚಾಯಿತಿ ಮೇಲ್ಛಾವಣಿಯ ಮೇಲೆ ಸೋಲಾರ್ ಘಟಕ ಸ್ಥಾಪಿಸಲು ಬಳಕೆ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹೇಶ ಭಾತೆ ಹೇಳಿದರು.
ತಾಲೂಕಿನ ಕರೋಶಿ ಗ್ರಾಮದ ಪಂಚಾಯಿತಿ ಸಭಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಸದಸ್ಯರ ಬೀಳ್ಕೊಡುವ ಹಾಗೂ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಸೋಲಾರ್ ವಿದ್ಯುತ್ ಘಟಕ ಉತ್ಪಾದನೆಯಿಂದ ಕರೋಶಿ ಗ್ರಾಮ ಪಂಚಾಯಿತಿಯನ್ನು ಸ್ವಾವಲಂಬಿ ಮಾಡಲಾಗುವುದು ಹಾಗೂ ಕಳೆದ 5 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದರು. ಮುಂಬರುವ ಚುನಾವಣೆಯಲ್ಲಿ ಜನರು ಅಭಿವೃದ್ಧಿ ಮಾಡುವವರಿಗೆ ಅವಕಾಶ ನೀಡುವಂತೆ ಅವರು ಜನರಲ್ಲಿ ಮನವಿ ಮಾಡಿದರು. ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಮಂಜುನಾಥ ಜನಮಟ್ಟಿ ಮಾತನಾಡಿ, ಗ್ರಾಮ ಪಂಚಾಯಿತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದರು. ಇಲ್ಲಿನ ಗ್ರಾಮಸ್ಥರು ಸಹಕಾರ ನೀಡುವಂತೆ ಜನರಲ್ಲಿ ಮನವಿ ಮಾಡಿದರು.
ಆಡಳಿತ ಅವಧಿ ಪೂರ್ಣಗೊಳಿಸಿದ ಗ್ರಾಮ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ಸಂಜಯ ರಾಮಪ್ಪ ಕಾಂಬಳೆ, ಉಪಾಧ್ಯಕ್ಷೆ ಸಾವಿತ್ರಿ ಜೇಧೆ, ಜಿ.ಪಂ. ಸದಸ್ಯ ಲಕ್ಷ್ಮೀ ಕುರಬರ, ತಾ.ಪಂ. ಸದಸ್ಯೆ ನಸೀಮಾಭಾನು ಪಟೇಲ್, ಪಿಡಿಒ ಎಸ್.ಎಂ. ಹುಬ್ಬಳ್ಳಿ, ಎಸ್.ವಿ. ಪ್ರದೀಪಕುಮಾರ ಇತರರಿದ್ದರು.