

ಎಂ.ಶಿವರಾಜ ಬೆಂ.ಗ್ರಾಮಾಂತರ
ವಿದ್ಯುತ್ ಅವಲಂಬನೆ ಕಡಿಮೆ ಮಾಡಲು ದಿಟ್ಟ ಹೆಜ್ಜೆ ಇಟ್ಟಿರುವ ಜಿಪಂ ಜಿಲ್ಲೆಯ ಒಟ್ಟು 105 ಗ್ರಾಪಂಗಳಲ್ಲಿ ಸೋಲಾರ್ ದೀಪ ಅಳವಡಿಕೆಗೆ ಮುಂದಾಗಿದೆ.
ಪ್ರತಿ ವರ್ಷ ಬೀದಿದೀಪಗಳಿಗಾಗಿಯೇ ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದ ಪಂಚಾಯಿತಿಗಳಿಗೆ ಈ ಸಾಲಿನಿಂದ ವೆಚ್ಚದ ಹೊರೆ ತಗ್ಗಲಿದೆ. ಇದಕ್ಕಾಗಿಯೇ ಪಂಚಾಯಿತಿಗಳಿಗೆ ಈಗಾಗಲೇ ಸೂಚನೆ ನೀಡಿದ್ದು, ಪಂಚಾಯಿತಿ ಆದಾಯದಲ್ಲಿ ಸೋಲಾರ್ ದೀಪ ಅಳವಡಿಕೆಗೆ ಆದ್ಯತೆ ನೀಡುವಂತೆ ಜಿಪಂ ಸಿಇಒ ಎನ್.ಎಂ.ನಾಗರಾಜ್ ಸೂಚನೆ ರವಾನಿಸಿದ್ದಾರೆ.
ಗ್ರಾಮವಿಕಾಸಕ್ಕೆ 22 ಗ್ರಾಪಂ:
ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯಡಿ ಆದ್ಯತೆ ಮೇರೆಗೆ ಸುಮಾರು 22 ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿ ಪಂಚಾಯಿತಿಗಳಲ್ಲಿ ಬೀದಿದೀಪ ಸೇರಿ ಅವಶ್ಯಕತೆ ಇರುವ ಕಡೆಗಳಲ್ಲಿ ಹೈಮಾಸ್ಟ್ ದೀಪ ಅಳವಡಿಕೆಗೆ ತಲಾ 5 ಲಕ್ಷ ರೂ. ಅನುದಾನ ಬಿಡುಗಡೆಗೆ ಜಿಪಂ ಸಿದ್ಧತೆ ನಡೆಸಿದೆ. ಹಂತಹಂತವಾಗಿ ಎಲ್ಲ ಪಂಚಾಯಿತಿಗಳಿಗೂ ಅನುದಾನ ವಿಸ್ತರಿಸುವ ಯೋಜನೆಯಿದ್ದು, ಪ್ರಾಥಮಿಕವಾಗಿ ಆಯಾ ಪಂಚಾಯಿತಿ ಆದಾಯವನ್ನು ಸೋಲಾರ್ ದೀಪ ಅಳವಡಿಕೆಗೆ ಬಳಸುವಂತೆ ಜಿಪಂ ಸೂಚನೆ ನೀಡಿದೆ.
ಜಿಲ್ಲೆ ಮುಂದು:
ಈ ಹಿಂದೆಯೇ ರಾಜ್ಯದ ಎಲ್ಲ ಗ್ರಾಪಂಗಳು ಯಾವುದಾದರೂ ಅನುದಾನದಲ್ಲಿ ಸೋಲಾರ್ ದೀಪ ಅಳವಡಿಸಿಕೊಂಡು ವಿದ್ಯುತ್ ಬಿಲ್ ಪಾವತಿಸುವ ಹೊರೆಯಿಂದ ಹೊರ ಬಂದು ಅದರ ಉಳಿತಾಯ ಹಣವನ್ನು ಇನ್ನಿತರ ಅಭಿವೃದ್ಧಿಗೆ ಬಳಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿತ್ತು. ಈ ಬಗ್ಗೆ ಕೆಲವೊಂದು ಪಂಚಾಯಿತಿಗಳು ಆಸಕ್ತಿ ತೋರಿಸಿದ್ದರೂ ಭಾಗಶಃ ಪಂಚಾಯಿತಿಗಳಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ.
ಲಾಕ್‌ಡೌನ್‌ನಿಂದ ಚೇತರಿಕೆ:
ಲಾಕ್‌ಡೌನ್‌ನಿಂದಾಗಿ ಎಲ್ಲ ಕ್ಷೇತ್ರಗಳಲ್ಲಿ ಆದಾಯ ಕುಂಠಿತಗೊಂಡಿದ್ದು, ಅನೇಕ ಗ್ರಾಪಂಗಳ ಆದಾಯ ಚೇತರಿಕೆ ಹಾದಿಯಲ್ಲಿವೆ. ಅನೇಕ ಪಂಚಾಯಿತಿಗಳು ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ದೂರು ಕೇಳಿಬಂದಿದೆ. ಸೋಲಾರ್ ಅಳವಡಿಕೆಯಿಂದ ಗ್ರಾಪಂಗಳು ಚೇತರಿಕೆ ಕಾಣಬಹುದು ಎಂಬ ಉದ್ದೇಶದಿಂದ ಈ ಯೋಜನೆಗೆ ಒತ್ತು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಚಾಯಿತಿ ಕಚೇರಿಗೂ ಬಳಕೆ: ಪ್ರಾಯೋಗಿಕವಾಗಿ ಬೀದಿದೀಪಗಳಿಗೆ ಸೋಲಾರ್ ಅಳವಡಿಕೆ ಕಾರ್ಯ ನಡೆಯುತ್ತಿದ್ದು, ನಂತರದಲ್ಲಿ ಪಂಚಾಯಿತಿ ಕಚೇರಿ, ಕಸ ಸಂಸ್ಕರಣಾ ಘಟಕ ಸೇರಿ ಎಲ್ಲ ಕಡೆಗಳಲ್ಲಿ ವಿಸ್ತರಿಸುವ ಚಿಂತನೆ ಇದೆ. ಈಗಾಗಲೇ ಮಜರಾಹೊಸಹಳ್ಳಿ ಪಂಚಾಯಿತಿಯಲ್ಲಿ ಸೋಲಾರ್ ದೀಪ ಅಳವಡಿಕೆ ಪ್ರಯತ್ನ ನಡೆಯುತ್ತಿದ್ದು ಯಶಕಂಡಿದೆ ಎನ್ನಲಾಗಿದೆ. ಚೊಕ್ಕಹಳ್ಳಿ, ಬಾಶೆಟ್ಟಹಳ್ಳಿ, ಮಜರಾಹೊಸಹಳ್ಳಿ, ಸಮೇತನಹಳ್ಳಿ ಪಂಚಾಯಿತಿಗಳು ಸೋಲಾರ್ ಅಳವಡಿಕೆಯಲ್ಲಿ ಮುಂದಿದ್ದು, ಇತರ ಗ್ರಾಪಂಗಳಿಗೆ ಮಾದರಿ ಎನಿಸಿವೆ.
ಮುಖ್ಯಮಂತ್ರಿ ಗ್ರಾಮವಿಕಾಸ್ ಯೋಜನೆಯಡಿ ಪ್ರಾಥಮಿಕ ಹಂತದಲ್ಲಿ ಜಿಲ್ಲೆಯ 22 ಪಂಚಾಯಿತಿಗಳಲ್ಲಿ ಸೋಲಾರ್ ಅಳವಡಿಕೆಗೆ ಅನುದಾನ ಬಿಡುಗಡೆಯಾಗಲಿದೆ. ಹಂತಹಂತವಾಗಿ ಎಲ್ಲ ಪಂಚಾಯಿತಿಗೂ ವಿಸ್ತರಿಸುವ ಯೋಜನೆ ಇದೆ. ವಿದ್ಯುತ್ ಸ್ವಾವಲಂಬನೆ ಸಾಧಿಸುವಲ್ಲಿ ಇದೊಂದು ಮೈಲಿಗಲ್ಲಾಗಲಿದೆ. ಎನ್.ಎಂ.ನಾಗರಾಜ್, ಸಿಇಒ ಬೆಂ.ಗ್ರಾಮಾಂತರ ಈ ಹಿಂದೆ ಮೊದಲ ಬಾರಿಗೆ ಚೊಕ್ಕನಹಳ್ಳಿ ಪಂಚಾಯಿತಿಯಲ್ಲಿ ಸೋಲಾರ್ ವ್ಯವಸ್ಥೆ ಪರಿಚಯಿಸಲಾಗಿತ್ತು. ಇದೀಗ ಹೊಸಕೋಟೆ ತಾಲೂಕು ಸಮೇತನಹಳ್ಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಲಾರ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ದಿಲೀಪ್ ಕುಮಾರ್, ಪಿಡಿಒ, ಸಮೇತನಹಳ್ಳಿ ಗ್ರಾಪಂ