

ಕೊಪ್ಪ : ಶೃಂಗೇರಿ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕಿನಲ್ಲಿ ಒಟ್ಟು 50 ಮನೆಗಳು ವನ್ಯಜೀವಿ ವ್ಯಾಪ್ತಿಯಲ್ಲಿ ಬರುವುದರಿಂದ ಅವುಗಳಿಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ. ಅವರಿಗೆ ಸೋಲಾರ್ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಮೆಸ್ಕಾಂ ಎಇ ಸಿದ್ದೇಶ್ ಹೇಳಿದರು.
ಬಾಳಗಡಿಯ ಮೆಸ್ಕಾಂ ವಿಭಾಗ ಕಚೇರಿಯಲ್ಲಿ ಚಿಕ್ಕಮಗಳೂರು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಗುಡ್ಡೆತೋಟ ಗ್ರಾಪಂ ಸದಸ್ಯ ವಾಸು ಅವರು, ಅಮ್ಮಡ್ಲುವಿನಲ್ಲಿ 4, ಮಾದಲ ಬೈಲುವಿನ 8 ಗಿರಿಜನ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಸಿದರು. ಬೆಳಕು ಯೋಜನೆಯಡಿ ಗ್ರಾಪಂನಿಂದ ಕಳುಹಿಸಿದ ಅರ್ಜಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಯೋಜನೆ ಮುಗಿದ ಮೇಲೆ ಬಂದ ಅರ್ಜಿ ಮಾತ್ರ ಉಳಿಕೆಯಾಗಿದೆ ಎಂದು ತಿಳಿಸಿದರು.
ಪದ್ಮನಾಭ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇನ್ನೂ ಹಲವು ಮನೆಗಳಿಗೆ ವಿದ್ಯುತ್ ಇಲ್ಲ. ಮೂಲ ಸೌಕರ್ಯ ಒದಗಿಸಲು ಯಾವುದೇ ವನ್ಯಜೀವಿ ಕಾಯ್ದೆ ಅಡ್ಡಿಪಡಿಸುವುದಿಲ್ಲ. ಜನಸಂಪರ್ಕ ಸಭೆಗೆ ಜನ ಸೇರಿಲ್ಲ ಎಂದರೆ ಸಮಸ್ಯೆ ಇಲ್ಲ ಎಂದರ್ಥವಲ್ಲ. ನೀವು ಪ್ರಚಾರ ಮಾಡಿಲ್ಲ ಎಂದರ್ಥ ಎಂದರು.
ಮೆಸ್ಕಾಂ ಎಇಇ ಸುಧೀರ್ ಪಟೇಲ್ ಮಾತನಾಡಿ, ಜಿಪಿಎಸ್ ಮಾಡಲು ತಡವಾಗುತ್ತಿದೆ.ಆದಷ್ಟು ಬೇಗ ಜಿಪಿಎಸ್ ಮಾಡಿ ಅರಣ್ಯಇಲಾಖೆಯಿಂದ ಅನುಮತಿ ಪಡೆದು ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮವಹಿಸಲಾಗುತ್ತದೆ . ಜನಸಂಪರ್ಕ ಸಭೆ ಇರುವ ಬಗ್ಗೆ ಸುದ್ದಿ ಪತ್ರಿಕೆ, ಗ್ರಾಮ ಪಂಚಾಯಿತಿಗಳ ಮೂಲಕ ಜನರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.