ಸೌರ ಸ್ವ-ಉದ್ಯೋಗ ಮೇಳ ಇಂದು

02Jaggu5
ಸುದ್ದಿಗೋಷ್ಠಿಯಲ್ಲಿ ವಿನಾಯಕ ಹೆಗಡೆ ಮಾತನಾಡಿದರು. ಚಂದ್ರಶೇಖರ ಮಡಿವಾಳರ, ಪ್ರಕಾಶ ಮೇಟಿ, ವೀರೇಶ ತಡಹಾಳ, ಸಂತೋಷ ಪತ್ತಾರ ಇದ್ದರು.
Published on

ಬೆಳಗಾವಿ: ಸೆಲ್ಕೋ ಫೌಂಡೇಷನ್ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಸೆ.3ರಂದು ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಬೆಳಗ್ಗೆ 10.30ರಿಂದ ಸಂಜೆ 5 ಗಂಟೆವರೆಗೆ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಸೌರ ಸ್ವ-ಉದ್ಯೋಗ ಮೇಳ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಫೌಂಡೇಷನ್‌ನ ಬೆಳಗಾವಿ ವಿಭಾಗದ ವ್ಯವಸ್ಥಾಪಕ ವಿನಾಯಕ ಹೆಗಡೆ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಮೇಳ ಉದ್ಘಾಟಿಸುವರು. ಕಾರ್ಯಕ್ರಮಕ್ಕೆ ವಿವಿಧ ಗಣ್ಯರು ಆಗಮಿಸುವರು. ಸ್ವ-ಸಹಾಯ ಗುಂಪಿನ ಮಹಿಳೆಯರಿಗಾಗಿ ಮಹಿಳಾ ಸ್ನೇಹಿ ತಂತ್ರಜ್ಞಾನಗಳ ಕುರಿತು ತಿಳಿವಳಿಕೆ ಹಾಗೂ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿದೆ ಎಂದರು. ತಮ್ಮ ಊರಲ್ಲಿ ಮಹಿಳೆಯರು ಬೆಳೆದು ಕುಟುಂಬಕ್ಕೆ ಬೆಳಕಾಗಬೇಕು ಎಂಬ ಉದ್ದೇಶದಿಂದ ಮಹಿಳೆಯರಿಗೆ ಸೌರ ಸ್ವ-ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತರಬೇತಿ ಪಡೆಯಬೇಕು ಎಂದರು. 14 ವರ್ಷಗಳಿಂದ ದೇಶ್ಯಾದ್ಯಂತ ಸುಸ್ಥಿರ ಅಭಿವೃದ್ಧಿ ಹಾಗೂ ಸೌರ ವಿದ್ಯುತ್ ವಿಭಾಗದಲ್ಲಿ ಸೆಲ್ಕೋ ಫೌಂಡೇಷನ್ ಹೊಸ ಆವಿಷ್ಕಾರಗಳನ್ನು ತಂದಿದೆ. ನಿರುದ್ಯೋಗಿ ಮಹಿಳೆಯರು ಬದುಕು ರೂಪಿಸಿಕೊಳ್ಳಲು ಸಹಕಾರ ನೀಡುತ್ತ ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಮಹಿಳೆಯರಿಗೆ ಸ್ವ-ಉದ್ಯೋಗ ಹಾಗೂ ಸೌರ ವಿದ್ಯುತ್ ಮೂಲಕ ಜೀವನೋಪಾಯ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಗಮನಾರ್ಹ ಕೆಲಸ ಮಾಡುತ್ತಿದೆ. ಜಿಲ್ಲಾದ್ಯಂತ 200ಕ್ಕೂ ಹೆಚ್ಚು ಅಂಗವಿಕಲರಿಗೆ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸಹಾಯ ಮಾಡಿದೆ ಎಂದರು. ಚಂದ್ರಶೇಖರ ಮಡಿವಾಳರ, ಪ್ರಕಾಶ ಮೇಟಿ, ವೀರೇಶ ತಡಹಾಳ, ಸಂತೋಷ ಪತ್ತಾರ, ಮಧು ರೆಡ್ಡಿ, ಮಾಲತೇಶ, ಮಹೇಶ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net