ರಾಜಭವನ ತಲುಪಿದ ಸೋಲಾರ್ ಹಗರಣ ತನಿಖಾ ವರದಿ

mng university
Published on

ಪುತ್ತೂರು: ಮಂಗಳೂರು ವಿಶ್ವವಿದ್ಯಾಲಯದ ಹಿಂದಿನ ಕುಲಪತಿ ಎಸ್.ಭೈರಪ್ಪ ಕಾಲಾವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಬಹುಕೋಟಿ ಸೋಲಾರ್ ಹಗರಣದ ಮಧ್ಯಂತರ ತನಿಖಾ ವರದಿ ರಾಜ್ಯಪಾಲರ ಕೈಸೇರಿದೆ.

ಹಗರಣದ ಮಧ್ಯಂತರ ತನಿಖಾ ವರದಿ ವಿವಿ ಸಿಂಡಿಕೇಟ್ ಸಭೆಗೆ ಸಲ್ಲಿಕೆಯಾಗಿದ್ದು, ಭೈರಪ್ಪ ಅವರನ್ನು ತನಿಖೆಗೆ ಒಳಪಡಿಸಲು ಅವಕಾಶ ನೀಡುವಂತೆ ವಿವಿ ತನಿಖಾ ತಂಡ ಸಿಂಡಿಕೇಟ್ ಸಭೆಗೆ ತಿಳಿಸಿತ್ತು. ಈ ಹಿನ್ನೆಲೆ ಹಗರಣದ ಇದುವರೆಗಿನ ತನಿಖೆಯ ವರದಿಯನ್ನು ಪೂರಕ ಸಾಕ್ಷೃ ಸಮೇತ ರಾಜ್ಯಪಾಲರಿಗೆ ಸಲ್ಲಿಸಲಾಗಿದೆ. ಅಲ್ಲದೆ, ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖಾ ತಂಡದಿಂದ ಭೈರಪ್ಪ ಅವರನ್ನು ವಿಚಾರಣೆ ಮಾಡುವಂತೆ ವಿವಿ ಸಿಂಡಿಕೇಟ್ ಸಭೆ ನಿರ್ಣಯಿಸಿ ರಾಜ್ಯಪಾಲರಿಗೆ ವರದಿ ನೀಡಿದೆ.

ಏನೇನು ಕಾಮಗಾರಿ?: ಪರೀಕ್ಷಾ ಕಾರ್ಯನಿರ್ವಹಣೆ ಗುತ್ತಿಗೆ, ಸೌರ ಮೇಲ್ಛಾವಣಿ ವ್ಯವಸ್ಥೆ, ಸಿಸಿಟಿವಿ ಅಳವಡಿಕೆ, ಗಣಕಯಂತ್ರ ಮತ್ತು ಲ್ಯಾಪ್‌ಟಾಪ್ ಖರೀದಿ ಪ್ರಕ್ರಿಯೆಯಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆ ಉಲ್ಲಂಘಿಸಿರುವುದು, ಅಂತಾರಾಷ್ಟ್ರೀಯ ವಿದ್ಯಾರ್ಥಿನಿಲಯ, ಕ್ಲಾಸ್‌ರೂಂ ಕಾಂಪ್ಲೆಕ್ಸ್ ಸಹಿತ ಇನ್ನಿತರೆ ಸಿವಿಲ್ ಕಾಮಗಾರಿಗಳನ್ನು ಸರ್ಕಾರದ ಪೂರ್ವಾನುಮೋದನೆ ಇಲ್ಲದೆಯೇ ವಿಶ್ವವಿದ್ಯಾಲಯ ಹಂತದಲ್ಲೇ ಕ್ರಮ ಕೈಗೊಂಡು ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿದೆ ಎಂಬ ತನಿಖಾ ವರದಿಯನ್ನು ಸರ್ಕಾರಕ್ಕೆ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಸಲ್ಲಿಸಿತ್ತು. ಇದರ ಬೆನ್ನಲ್ಲೇ ತನಿಖಾ ವರದಿ ಆಧರಿಸಿ ಉನ್ನತ ಶಿಕ್ಷಣ ಇಲಾಖೆ ಮಂಗಳೂರು ವಿವಿಗೆ ನೋಟಿಸ್ ನೀಡಿತ್ತು.

100 ಕೋಟಿ ರೂ. ಮೀರಿದ ಹಗರಣ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೊ.ಕೆ.ಭೈರಪ್ಪ ಕುಲಪತಿಗಳಾಗಿದ್ದ ಸಂದರ್ಭ ನಡೆದಿರುವ ಹಗರಣದ ಮೊತ್ತ 100 ಕೋಟಿ ರೂಪಾಯಿಗೂ ಮೀರಿದೆ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ವಿಧಾನಪರಿಷತ್‌ನಲ್ಲಿ ಹಿಂದೆ ಆರೋಪಿಸಿದ್ದರು. ಈ ಸಂದರ್ಭ ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಗೆ ಸರ್ಕಾರ ಆದೇಶಿಸಿತ್ತು. ಅವ್ಯವಹಾರಗಳನ್ನು ಸಾಬೀತುಪಡಿಸಿರುವ ಲೆಕ್ಕಪರಿಶೋಧಕರ ತನಿಖಾ ತಂಡ ಸರ್ಕಾರಕ್ಕೆ ಕಳೆದ 2020ರ ಜ.22ರಂದು ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಸೌರ ಮೇಲ್ಛಾವಣಿ ವ್ಯವಸ್ಥೆ ಯೋಜನೆ ಬಗ್ಗೆ ಪೂರ್ಣ ವಿವರ ನೀಡಲಾಗಿದೆ.

ಸೌರ ಮೇಲ್ಛಾವಣಿ ವ್ಯವಸ್ಥೆ ಯೋಜನೆಯಲ್ಲಿ ಅವ್ಯವಹಾರ ನಡೆದಿರುವ ಮಧ್ಯಂತರ ತನಿಖಾ ವರದಿ ವಿವಿ ಸಿಂಡಿಕೇಟ್ ಸಭೆಗೆ ಸಲ್ಲಿಕೆಯಾಗಿದೆ. ಪ್ರೊ.ಭೈರಪ್ಪ ಕಾಲಾವಧಿಯಲ್ಲಿ ನಡೆದ ಯೋಜನೆಗಳನ್ನು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖಾ ತಂಡದಿಂದ ವಿಚಾರಣೆ ನಡೆಸುವಂತೆ ಕೋರಲಾಗಿದೆ. - ರಮೇಶ್ ಕೌಡೂರು, ಸಿಂಡಿಕೇಟ್ ಸದಸ್ಯ, ಮಂಗಳೂರು ವಿಶ್ವವಿದ್ಯಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net