ಜಮೀನು ಒತ್ತುವರಿ ತಡೆಗೆ ಸೌರಶಕ್ತಿ ವಿದ್ಯುತ್ ಘಟಕ: ಡಿಸಿಎಂ ಡಿ.ಕೆ.ಶಿವಕುಮಾರ್

D. K. Shivakumar
Published on

ಬೆಂಗಳೂರು: ತಿಪ್ಪನಗೊಂಡನಹಳ್ಳಿಯಲ್ಲಿ 300 ಎಕರೆ, ಹೆಸರುಘಟ್ಟದಲ್ಲಿ 100 ಎಕರೆ ಸ್ವಂತ ಜಮೀನು ಬಿಡಬ್ಲ್ಯುಎಸ್‌ಎಸ್‌ಬಿ ಹೊಂದಿದೆ. ಈ ಜಮೀನಿನಲ್ಲಿ ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸುವ ಚಿಂತನೆಯಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ವಿವಿಧ ಇಲಾಖೆಗಳ ಸಮನ್ವಯ ಸಭೆ ಮಂಗಳವಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಯಿಂದ ಜಮೀನಿಗೆ ರಕ್ಷಣೆ, ಕಡಿಮೆ ದರದ ವಿದ್ಯುತ್ ಪಡೆಯಲು ಸಾಧ್ಯವಿದೆ. ಸದ್ಯ ಮಂಡಳಿಯು ಪ್ರತಿ ಯೂನಿಟ್‌ಗೆ ಆರು ರೂ.ನಂತೆ ಒಂದು ಸಾವಿರ ಕೋಟಿ ರೂ. ಬಿಲ್ ಭರಿಸುತ್ತಿದೆ.

ಮಂಡಳಿಯು ತನ್ನದೇ ಆದ ಸೌರಶಕ್ತಿ ಆಧಾರಿತ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪಿಸಿದರೆ, ಯೂನಿಟ್‌ಗೆ ನಾಲ್ಕು ರೂ.ನಂತೆ ಪಡೆಯಬುದಾಗಿದೆ. ಈ ವಿಚಾರ ಪರಿಶೀಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಸಂತೋಷ, ಮಾರ್ಗದರ್ಶನ !

ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದ ಶಾಸಕ ಮುನಿರತ್ನ ಪ್ರತಿಭಟನೆ ನಡೆಸುವುದಾದರೆ ಸಂತೋಷ, ಸ್ವಾಗತಿಸುತ್ತೇವೆ. ಕಾಮಗಾರಿಗಳಿಗೆ ಬಿಲ್ ಪಾವತಿ ವಿಷಯದಲ್ಲಿ ಬೊಮ್ಮಾಯಿ ನೀಡಿದ ಮಾರ್ಗದರ್ಶನ, ಬಿಜೆಪಿಯವರು ನೀಡಿದ ತಿಳಿವಳಿಕೆಯಂತೆ ನಡೆದುಕೊಳ್ಳುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿವಿದರು.

ಅಮೃತ ನಗರೋತ್ಥಾನ ಯೋಜನೆಯಡಿ ಹಂಚಿಕೆಯಾಗಿದ್ದ 468 ಕೋಟಿ ರೂ. ವಾಪಸ್ ಪಡೆದು, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಹಂಚಿಕೆಯಾಗಿದೆಯಂತಲ್ಲ ? ಎಂಬ ಪತ್ರಕರ್ತರ ಮತ್ತೊಂದು ಪ್ರಶ್ನೆಗೆ ಬೊಮ್ಮಾಯಿಯವರ ಮಾರ್ಗದರ್ಶನ, ಬಿಜೆಪಿ ನೀಡಿದ ತಿಳಿವಳಿಕೆಯಂತೆ ನಡೆಯುತ್ತಿದ್ದೇವೆ ಎಂದು ಡಿಕೆಶಿ ಪುನರುಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net