

ವಿಜಯವಾಣಿ ಸುದ್ದಿಜಾಲ ಧಾರವಾಡ
ಸೌರ ವಿದ್ಯುತ್ ಉತ್ಪಾದನೆಯಿಂದ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಪೂರಕ ವಾತಾವರಣ ನಿರ್ಮಾಣಗೊಳ್ಳುತ್ತಿದೆ ಎಂದು ಗ್ರೀನ್ ಲ್ಯಾಂಡ್ ಬಯೋಟೆಕ್ ಸಿಇಒ ಬಾಲಚಂದ್ರ ಜಾಬಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪವು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಸೌರ ವಿದ್ಯುತ್ ಉತ್ಪಾದನಾ ಅವಕಾಶಗಳು ಹಾಗೂ ಸಬ್ಸಿಡಿ ಲಭ್ಯತೆ ಕುರಿತು ಅವರು ಮಾತನಾಡಿದರು.
ನೂತನ ತಂತ್ರಜ್ಞಾನಗಳ ಅಳವಡಿಕೆಯಿಂದ ಭಾರತ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವ ದಿನಗಳು ದೂರವಿಲ್ಲ. ಒಂದೇ ವಿಶ್ವ, ಒಬ್ಬನೇ ಸೂರ್ಯ, ಒಂದೇ ವಿದ್ಯುತ್ ಗ್ರಿಡ್ ಪರಿಕಲ್ಪನೆ ಮತ್ತು ತತ್ವಗಳನ್ನಾಧರಿಸಿ ವಿವಿಧ ದೇಶಗಳು ಸೌರ ವಿದ್ಯುತ್ ಉತ್ಪಾದನೆಯೆಡೆಗೆ ಪರಸ್ಪರ ಕೈ ಜೋಡಿಸುತ್ತಿರುವುದು ಒಳ್ಳೆ ಬೆಳವಣಿಗೆ. ಮುಂದಿನ ದಿನಗಳಲ್ಲಿ ಜಗತ್ತನ್ನು ಆಳುವ ಶಕ್ತಿಯಾಗಿ ಸೋಲಾರ್ ಎನರ್ಜಿ ಬರಲಿದೆ ಎಂದರು.
ಸೌರ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಭಾರತ ಹೊಸ ಮೈಲಿಗಲ್ಲು ಸ್ಥಾಪಿಸುವತ್ತ ದಾಪುಗಾಲು ಹಾಕುತ್ತಿದೆ. ಉಚಿತವಾಗಿ ದೊರಕುವ ಸೌರಶಕ್ತಿಯಿಂದ ಜಾಗತಿಕ ಇಂಧನ ಸಮಸ್ಯೆಗಳನ್ನು ಪರಿಹರಿಸುವುದರೊಂದಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದರು.
ಜೆಎಸ್ಎಸ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರೊ. ಟಿ.ಎಂ. ಶ್ರೀಧರ ಅಧ್ಯಕ್ಷತೆ ವಹಿಸಿದ್ದರು. ಬಸವಪ್ರಭು ಹೊಸಕೇರಿ, ಶಂಕರ ಕುಂಬಿ, ವೀರಣ್ಣ ಒಡ್ಡೀನ, ಬಿ.ಎಲ್. ಪಾಟೀಲ, ಟಿ.ಎಸ್. ಕ್ವಾಟಿಹಳ್ಳಿ, ಶಿವಲಿಂಗಪ್ಪ ಮಾಸ್ತಮರಡಿ, ಮಹಾಂತೇಶ ನರೇಗಲ್, ಮಧುಮತಿ ಸಣಕಲ್, ಬಸವರಾಜ ಕಪಲಿ, ಇತರರು ಇದ್ದರು.
ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ನವೀನಶಾಸ್ತ್ರಿ ಪುರಾಣಿಕ ವಂದಿಸಿದರು.