

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ಹೊಸಕೋಟೆ
ಸೌರ ವಿದ್ಯುತ್ ಘಟಕದಲ್ಲಿ 7.3 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗಲಿದ್ದು, ನಂದಗುಡಿ ಹೋಬಳಿಯ ಮುಗಬಾಳ ಗ್ರಾಮ ಪಂಚಾಯ್ತಿಯ 33 ಗ್ರಾಮಗಳ 1,383 ಕೃಷಿಪಂಪ್ ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಪಿಎಂ ಕುಸುಮ್- ಸಿ ಯೋಜನೆಯಡಿ ಹೊಸಕೋಟೆಯ ಯಲಚಹಳ್ಳಿ ಕೆರೆ ಅಂಗಳದಲ್ಲಿ ಸ್ಥಾಪಿಸಲಾದ ಸೌರ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆಯೇ ಸಮರ್ಪಕ ವಿದ್ಯುತ್ ಪೂರೈಸಲು ನೆರವಾಗುವ ಫೀಡರ್ ಮಟ್ಟದ ಸೌರೀಕರಣ ಯೋಜನೆಯಾದ ’ಕುಸುಮ್- ಸಿ’ಗೆ ವೇಗ ನೀಡಿ ಶಕ್ತಿ ತುಂಬಿರುವುದು ರಾಜ್ಯ ಸರ್ಕಾರವಾಗಿದೆ, ಈ ಯೋಜನೆಯಿಂದ ರೈತರಿಗೆ 7 ಗಂಟೆಗಳ ಕಾಲ ವಿದ್ಯುತ್ ನೀಡಲು ಸಾಧ್ಯವಾಗಲಿದೆ. ಯಲಚಹಳ್ಳಿಯ ಈ ಸೌರ ಘಟಕದಿಂದ 4 ಕೃಷಿ ಫೀಡರ್‌ಗಳು ಸೋಲಾರ್ ವಿದ್ಯುತ್ ವಿತರಣೆ ಜಾಲವಾಗಿ ಬದಲಾಗಲಿದೆ ಎಂದರು.
ರೈತರಿಗೆ ವರದಾನ: ಕುಸುಮ್-ಸಿ ಯೋಜನೆ ರೈತರಿಗೆ ಅದರಲ್ಲೂ ಮುಖ್ಯವಾಗಿ ಬೆಂಗಳೂರಿನ ಗೇಟ್‌ವೇ ಎನಿಸಿಕೊಂಡಿರುವ ಹೊಸಕೋಟೆ ಗ್ರಾಮೀಣ ಭಾಗದ ರೈತರಿಗೆ ವರದಾನವಾಗಿದೆ. ಯೋಜನೆ ಜಾರಿಗೊಳಿಸಲು ಸರ್ಕಾರ ಎಲ್ಲ ಬೆಂಬಲ ನೀಡುತ್ತಿದೆ.ಶಾಸಕ ಶರತ್ ಬಚ್ಚೇಗೌಡ ಅವರು ಆಸಕ್ತಿ ವಹಿಸಿ ಯೋಜನೆ ಅನುಷ್ಠಾನಗೊಳಿಸಿದ್ದಾರೆ. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಸರ್ಕಾರಿ ಭೂಮಿ ಲಭ್ಯವಿರದ ಸ್ಥಳಗಳಲ್ಲಿ ರೈತರೇ ಭೂಮಿಯನ್ನು ಗುತ್ತಿಗೆ ನೀಡುವ ಮೂಲಕ ವಾರ್ಷಿಕ ಆದಾಯಗಳಿಸಬಹುದಾಗಿದೆ. ಹಾಗಾಗಿ,ರೈತರು ಭೂಮಿ ನೀಡಲು ಮುಂದೆ ಬರಬೇಕು, ಎಂದು ಜಾರ್ಜ್ ಮನವಿ ಮಾಡಿದರು.
120 ಹೊಸ ಸಬ್‌ಸ್ಟೇಷನ್: ಸರ್ಕಾರ ಬಂದ ಸಂದರ್ಭದಲ್ಲಿ 8-9 ಸಾವಿರ ಮೆಗಾ ವ್ಯಾಟ್‌ನಷ್ಟಿದ್ದ ವಿದ್ಯುತ್ ಬೇಡಿಕೆ ಏಕಾಏಕಿ 18 ಸಾವಿರ ಮೆಗಾವ್ಯಾಟ್‌ಗೆ ಏರಿತು. ಆಗ ಅನ್ಯ ರಾಜ್ಯಗಳೊಂದಿಗೆ ವಿದ್ಯುತ್ ವಿನಿಮಯ ಒಪ್ಪಂದ ಮಾಡಿಕೊಂಡು ಜನರಿಗೆ ತೊಂದರೆ ಆಗದಂತೆ ನೋಡಿಕೊಂಡೆವು ಎಂದು ತಿಳಿಸಿದ ಇಂಧನ ಸಚಿವರು ನಂತರದ ದಿನಗಳಲ್ಲಿ ಹಲವು ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡು ವಿದ್ಯುತ್ ಉತ್ಪಾದನೆ ಹೆಚ್ಚಿಸಲಾಗಿದೆ. ಸದ್ಯ ವಿದ್ಯುತ್ ಕೊರತೆ ಇಲ್ಲ. ಆದರೆ, ಲೋಡ್ ಹೆಚ್ಚಳವಾಗಿ ಪೂರೈಕೆಯಲ್ಲಿ ಸಮಸ್ಯೆ ಆಗುತ್ತದೆ ಇದನ್ನು ಸರಿಪಡಿಸುವ ಉದ್ದೇಶದಿಂದ 120 ಹೊಸ ಸಬ್‌ಸ್ಟೇಷನ್‌ಗಳನ್ನು ನಿರ್ಮಿಸಲಾಗುವುದು ಎಂದು ವಿವರಿಸಿದರು.
ಹೊಸಕೋಟೆಯಲ್ಲಿ 6 ವಿದ್ಯುತ್ ಕೇಂದ್ರ: ಸಚಿವರು ನಮ್ಮ ಮನವಿಗೆ ಸದಾ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ. ಹೊಸಕೋಟೆಟೌನ್‌ನಲ್ಲಿ ಭೂಗತ ಕೇಬಲ್ ಅಳವಡಿಕೆಗೆ ಸುಮಾರು 120 ಕೋಟಿ ರೂ.ಅನುದಾನ ಕೊಟ್ಟಿದ್ದಾರೆ. ಹೊಸಕೋಟೆಯಲ್ಲಿ 6 ವಿದ್ಯುತ್ ಉಪಕೇಂದ್ರ ಘಟಕ ಸ್ಥಾಪನೆಗೆ ಅವಕಾಶ ಕಲ್ಪಿಸಿದ್ದಾರೆ ಎಂದು ಶಾಸಕ ಶರತ್‌ಬಚ್ಚೇಗೌಡ ತಿಳಿಸಿದರು. ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಭೂಮಿ ಕಳೆದುಕೊಂಡ ರೈತರಿಗೆ ಧನ್ಯವಾದ ಹೇಳಬೇಕಿದೆ. ಸೌರ ವಿದ್ಯುತ್ ಘಟಕದಿಂದ ಹೊಸಕೋಟೆಯ ಮಹಾ ಜನತೆಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಸಹಕಾರಿಯಾಗಿದೆ, ವಿದ್ಯುತ್‌ಭರಿತ ರಾಜ್ಯ ಮಾಡಬೇಕು ಎಂಬುದು ನಮ್ಮ ಸರ್ಕಾರದ ಕನಸು, ನವೀಕರಿಸಬಹುದಾದ ಇಂಧನ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಮಾದರಿ ಶಾಲೆ:
ವೋಲ್ವೋ ಸಂಸ್ಥೆಯು ತಾವರೆಕೆರೆ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ 3.5 ಕೋಟಿ ರೂ.ಗಳ ಸಿಎಸ್ಆರ್ ಅನುದಾನದಡಿ ನೂತನ ಕಟ್ಟಡ ನಿರ್ಮಿಸುತ್ತಿದೆ. 1 ತರಗತಿಯಿಂದ 10 ನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಸಿಗಬೇಕು ಹಾಗೆಯೇ ಗುಣಮಟ್ಟದ ಶಿಕ್ಷಣ, ಮೂಲ ಸೌಕರ್ಯಗಳನ್ನು ಒದಗಿಸಿ ಮಕ್ಕಳ ಭವಿಷ್ಯ ರೂಪಿಸುವುದು ಇದರ ಉದ್ದೇಶ. ತಾವರೆಕೆರೆ ಶಾಲೆಯು ಮುಂದಿನ ದಿನಗಳಲ್ಲಿ ಮಾದರಿ ಶಾಲೆ ಆಗಲಿದೆ ಎಂದು ಶಾಸಕರು ತಿಳಿಸಿದರು.