ಸೋಲಾರ್‌ಪಾರ್ಕ್ ಬುಡದಲ್ಲೇ ವಿದ್ಯುತ್ ಸಮಸ್ಯೆ ; ವೋಲ್ಟೇಜ್ ಇಲ್ಲದೆ ಸುಡುತ್ತಿವೆ ಮೋಟರ್, ಪಂಪ್ ; ರಾತ್ರಿ ತೋಟಗಳಲ್ಲಿ ರೈತರ ಭಜನೆ ; ಸಿಬ್ಬಂದಿ, ಮೂಲಸೌಕರ್ಯದ ಕೊರತೆ

IMG_20220209_103614
Published on

ಪಾವಗಡ ; ಏಷ್ಯಾ ಖಂಡದಲ್ಲಿಯೇ ಅತೀ ದೊಡ್ಡ 2ನೇ ಸೋಲಾರ್ ಪಾರ್ಕ್ ಹೊಂದಿರುವ ಪಾವಗಡ ತಾಲೂಕಿನ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಇಲ್ಲ. ಹೀಗಾಗಿ ದೀಪದ ಕೆಳಗೆ ಕತ್ತಲು ಎಂಬ ಸ್ಥಿತಿ ಇಲ್ಲಿನ ರೈತರದ್ದಾಗಿದೆ. ತಾಲೂಕಿನಲ್ಲಿ 8 ವಿದ್ಯುತ್ ಸ್ಥಾವರಗಳಿದ್ದು, 7 ಉಪಸ್ಥಾವರಗಳು 66/11ಕೆವಿ, ಒಂದು 22ಕೆವಿ ವಿದ್ಯುತ್ ಸ್ಥಾವರವಿದ್ದು ರೈತರಿಗೆ ರಾತ್ರಿ 3 ಹಾಗೂ ಹಗಲಲ್ಲಿ 4 ಒಟ್ಟು 7 ಗಂಟೆ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದೆ.

ಬೆಸ್ಕಾಂ ವತಿಯಿಂದ ನೀಡಲಾಗುತ್ತಿರುವ 7 ಗಂಟೆ ವಿದ್ಯುತ್ ಕೂಡ ಸರಿಯಾಗಿ ಸರಬರಾಜು ಆಗದೆ ರೈತರು ಪರದಾಡುವ ಸ್ಥಿತಿಯಿದೆ, ತಾಲೂಕಿನಲ್ಲಿ ಲಕ್ಷಾಂತರ ಸಂಖ್ಯೆಯ ಪಂಪ್‌ಸೆಟ್‌ಗಳಿದ್ದು, ವೋಲ್ಟೇಜ್ ಸಮಸ್ಯೆಯಿಂದ ರೈತರು ತತ್ತರಿಸಿದ್ದಾರೆ. ತಾಲೂಕಿನಲ್ಲಿ 6156 ಟ್ರಾನ್‌ಸ್ಾರ್ಮರ್‌ಗಳಿದ್ದು, ಈ ಪೈಕಿ 15ಕೆವಿ ಸಾಮರ್ಥ್ಯ 17, 25 ಕೆವಿ ಸಾಮರ್ಥ್ಯದ 4184 ಹಾಗೂ 63ಕೆವಿ ಸಾಮರ್ಥ್ಯದ 1168, 100ಕೆವಿ ಸಾಮರ್ಥ್ಯದ 767, 200ಕೆವಿ ಸಾಮರ್ಥ್ಯದ 4 ಹಾಗೂ 250 ಕೆವಿಯ 16 ಕಾರ್ಯನಿರ್ವಹಿಸುತ್ತಿದೆ.

ವೋಲ್ಟೇಜ್ ಸಮಸ್ಯೆ: ಬೇಸಿಗೆ ಆರಂಭದಲ್ಲಿಯೇ ಗಡಿನಾಡು ಪಾವಗಡ ತಾಲೂಕಿನಲ್ಲಿ ಪ್ರಸ್ತುತ 7 ಗಂಟೆ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದೆ. ಆದರೆ, ಲೈನ್ ಸಮಸ್ಯೆ, ವೋಲ್ಟೇಜ್ ಮತ್ತಿತರ ಸಮಸ್ಯೆಗಳ ಕಾರಣಕ್ಕೆ ಮೋಟರ್ ಪಂಪ್‌ಗಳು ಕಾರ್ಯನಿರ್ವಹಿಸಿದ್ದು ಕಡಿಮೆ. ರಾತ್ರಿ 3ಗಂಟೆ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡುತ್ತಾರೆ ಎಂದು ರೈತರು ಮನೆಗಳಲ್ಲಿ ಮಲಗದೇ ತೋಟಗಳಲ್ಲಿ ಕಾದು ಕುಳಿತುಕೊಳ್ಳುವ ಸ್ಥಿತಿಯಿದೆ. ಕಾಡು ಪ್ರಾಣಿಗಳ ಹಾವಳಿಯ ನಡುವೆಯೂ ಭಯದಲ್ಲಿಯೇ ರಾತ್ರಿಯೆಲ್ಲಾ ತೋಟದಲ್ಲಿ ಕಾದರೂ ವೋಲ್ಟೇಜ್ ಸಮಸ್ಯೆಯಿಂದ ಮೋಟರ್‌ಪಂಪ್‌ನಲ್ಲಿ ನೀರೂ ಬರದೇ ಸುಟ್ಟು ನಷ್ಟ ಉಂಟುಮಾಡುತ್ತಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ನೆನೆಗುದಿಗೆ ಎರಡು ಉಪಸ್ಥಾವರದ ಪ್ರಸ್ತಾಪ ; ವಿದ್ಯುತ್ ಸಮಸ್ಯೆಗೆ ಪರಿಹಾರವಾಗಿ ತಾಲೂಕಿನ ಕಿಲಾರ‌್ಲಹಳ್ಳಿ ಹಾಗೂ ತಿರುಮಣಿಯಲ್ಲಿ 66/11ಕೆವಿ ಉಪಸ್ಥಾವರದ ಅಗತ್ಯವಿದ್ದು, ಈ ಭಾಗದ ರೈತರಿಂದ ಬೇಡಿಕೆಯಿದೆ. ವಿದ್ಯುತ್ ಪರಿಕರಗಳ ಸಂಗ್ರಹಕ್ಕೆ ಒಂದು ಉಗ್ರಾಣದ ಅಗತ್ಯವಿದೆ, ಬಿಡಿ ಭಾಗಗಳು ಅಗತ್ಯವಿದ್ದಾಗ ತಿಂಗಳಾನುಗಟ್ಟಲೇ ರಿಪೇರಿ ಇಲ್ಲದೆ ಜನರು ಪರಿತಪಿಸುವುದು ಸಾಮಾನ್ಯ ಎನಿಸಿದೆ. ವಿದ್ಯುತ್ ಲೈನ್, ಟಿಸಿಗಳ ಮೇಲೆ ಗಿಡ, ಬಳ್ಳಿ ಬೆಳೆದು ಸಮಸ್ಯೆ ತಂದೊಡ್ಡುತ್ತಿದ್ದು ಇದನ್ನು ತೆಗೆಯಲು ಜಂಗಲ್ ಕಟ್ಟಿಂಗ್ ಯಂತ್ರ ಕೂಡ ಇಲ್ಲ. ಕಟಿಂಗ್ ಯಂತ್ರದ ವಾಹನಕ್ಕೆ ಬೆಸ್ಕಾಂ ಇಲಾಖೆ ಇನ್ನೂ ಮನ್ನಣೆಯನ್ನೇ ನೀಡಿಲ್ಲ.

ಸಿ.ಕೆ.ಪುರ, ವೆಂಕಟಾಪುರದಲ್ಲಿ ಕಟ್ಟಡವೇ ಇಲ್ಲ : ನಿಡಗಲ್ಲು ಹೋಬಳಿ ಚನ್ನಕೇಶವಪುರ, ನಕ್ಸಲ್ ದಾಳಿಯ ಕುಖ್ಯಾತಿ ಹೊಂದಿರುವ ತಾಲೂಕಿನ ಗಡಿ ಗ್ರಾಮ ವೆಂಕಟಾಪುರ ಹಾಗೂ ಸೋಲಾರ್‌ಪಾರ್ಕ್‌ಗಳಿಂದ ತುಂಬಿರುವ ನಾಗಲಮಡಿಕೆ ಕಾರ್ಯ ಮತ್ತು ಪಾಲನಾ ಘಟಕಗಳಿಗೆ ಸ್ವಂತ ಕಟ್ಟಡ ಕೂಡ ಇಲ್ಲ. ಬಾಡಿಗೆ ಕಟ್ಟದಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದೆ. ತಾಲೂಕು ಕೇಂದ್ರದಲ್ಲಿರುವ ಬೆಸ್ಕಾಂ ಸಿಬ್ಬಂದಿ ವಸತಿಗೃಹಗಳು ಕೂಡ ಶಿಥಿಲವಾಗಿದ್ದು, ಸಿಬ್ಬಂದಿ ವಾಸವಿರಲು ಅಂಜುವ ಸ್ಥಿತಿಯಿದೆ.

ಸೋಲಾರ್‌ಪಾರ್ಕ್‌ನಿಂದಲೂ ವಿದ್ಯುತ್ : ತಾಲೂಕಿನಲ್ಲಿಯೇ ಇರುವ ಸೋಲಾರ್‌ಪಾರ್ಕ್ ಉಪಯೋಗ ತಾಲೂಕಿನ ರೈತರಿಗೆ ಇಲ್ಲದಂತಾಗಿದೆ, ಪ್ರಸ್ತುತ ಸರ್ಕಾರದ ಕ್ರೆಡಲ್ ಸಂಸ್ಥೆ 1600ಮೆ.ವ್ಯಾಟ್ ಉತ್ಪಾದನೆ ಮಾಡುತ್ತಿದೆ. ಆದರೆ, ಖಾಸಗಿ ಕಂಪನಿಗಳಿಂದ 50 ಮೆ.ವ್ಯಾ ವಿದ್ಯುತ್ ಪಾವಗಡ ತಾಲೂಕಿಗೆ ನೀಡಲಾಗುತ್ತಿದೆ. ಆದರೆ, ತಾಲೂಕಿಗೆ ಸಾಕಾಗುವಷ್ಟು ವಿದ್ಯುತ್ ಅನ್ನು ಸೋಲಾರ್‌ಪಾರ್ಕ್ ಮೂಲಕವೇ ಪಡೆದು ಸರಬರಾಜು ಮಾಡಿದರೆ ವೋಲ್ಟೇಜ್ ಸಮಸ್ಯೆ ಬಗೆಹರಿಯಲಿದೆ.

ಬೇಸಿಗೆಯಲ್ಲಿ ಬೆಳೆಗೆ ನೀರು ಅಗತ್ಯವಿದ್ದು, ಪಂಪ್‌ಸೆಟ್‌ಗೆ 7 ಗಂಟೆ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದೆ. ವೋಲ್ಟೇಜ್ ಸಮಸ್ಯೆಯಿಂದ ಪಂಪ್‌ಗಳು ನೀರೆತ್ತಲು ಸಾಧ್ಯವಾಗದೆ ಸುಟ್ಟು ಹೋಗುತ್ತಿವೆ. ಬೆಸ್ಕಾಂ ಕೊಡುವ 7ಗಂಟೆ ವಿದ್ಯುತ್ ಅನ್ನು ಹಗಲಲ್ಲಿ ಕೊಡಲಿ, ರೈತರು ನೆಮ್ಮದಿಯಿಂದ ಮನೆಯಲ್ಲಿ ಮಲಗುವಂತಾಗಲಿ. ಗೋವಿಂದರಾಜು ರೈತ, ಕಳರಾಜನಹಳ್ಳಿ ತಾಲೂಕಿನಲ್ಲಿ ರೈತರಿಗೆ 7 ಗಂಟೆ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿದೆ, ತಾಲೂಕಿನಲ್ಲಿ 250 ಸಿಬ್ಬಂದಿ ಮಂಜೂರಾಗಿದ್ದು 148 ಜನ ಕಾರ್ಯನಿರ್ವಹಿಸುತ್ತಿದ್ದಾರೆ, 110 ಖಾಲಿ ಹುದ್ದೆಯಿದ್ದು ಇರುವ ಸಿಬ್ಬಂದಿಯೇ ರೈತರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕೃಷ್ಣಮೂರ್ತಿ ಎಇಇ, ಬೆಸ್ಕಾಂ ಪಾವಗಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net