

ಬೆಂಗಳೂರು: ಜಗತ್ತಿನ ವಿವಿಧ ರಾಷ್ಟ್ರಗಳ ಕುಗ್ರಾಮಗಳಲ್ಲಿ ನೆಲೆಸಿರುವ ಬಡಜನರಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಸೌರಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಯಶಸ್ವಿಯಾಗಬಹುದು ಎಂದು ಜಾಗತಿಕ ಸೌರಶಕ್ತಿ ತಜ್ಞ ರಿಚರ್ಡ್ ಹ್ಯಾನ್ಸೆನ್ಸ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಸೆಲ್ಕೋ ಕಂಪನಿ ಸೋಮವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ಜಾಗತಿಕ ಸೂರ್ಯಮಿತ್ರ - 2024’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಪ್ರಸ್ತುತ ವಿಶ್ವದಲ್ಲಿ ಶೇ.30 ಮಂದಿ ವಿದ್ಯುತ್ ಸೌಲಭ್ಯವಿಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿ ಬಹುತೇಕರು ಅಭಿವೃದ್ಧಿಯಲ್ಲಿ ಹಿಂದುಳಿದಿರುವ ದೇಶಗಳಿಗೆ ಸೇರಿದ್ದಾರೆ. ಇವರಿಗೆ ಕಾಲಮಿತಿಯಲ್ಲಿ ವಿದ್ಯುತ್ ಸೌಲಭ್ಯ ಒದಗಿಸಲು ಸೌರಶಕ್ತಿಯಿಂದ ಸಾಧ್ಯವಿದೆ. ವಿಶ್ವಸಂಸ್ಥೆ 17 ಅಂಶಗಳ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ) ನಿಗದಿಪಡಿಸಿದ್ದು, ಈ ಪೈಕಿ ಬಡತನ ನಿವಾರಣೆ, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯ ಪ್ರಮುಖವಾಗಿವೆ. ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಇಂತಹ ಜನರಿಗೆ ಸೌರಶಕ್ತಿ ಸೌಲಭ್ಯ ಕಲ್ಪಿಸುವುದರಿಂದ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬಹುದಾಗಿದೆ ಎಂದರು.
ತಮ್ಮ ನೇತೃತ್ವದಲ್ಲಿ ಸಂಘಟಿಸಿರುವ ಎನರ್ಜಿ ಆಕ್ಸಿಸ್ ಫೌಂಡೇಷನ್ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು ಅಧುನಿಕ ಫೋಟೋ ವೋಲ್ಟಾಯಿಕ್ (ಪಿವಿ) ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ಮಂದಿಗೆ ಬೆಳಕು ನೀಡುವಲ್ಲಿ ಸಲರಾಗಿದ್ದೇವೆ. ಭಾರತದಲ್ಲಿ ಸೆಲ್ಕೋ ಕಂಪನಿ ಭಾರೀ ಯಶಸ್ವಿ ಸಾಧಿಸಿದ್ದು, ಅದರೊಟ್ಟಿಗೆ ಎಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದು ರಿಚರ್ಡ್ ಹ್ಯಾನ್ಸೆನ್ಸ್ ತಿಳಿಸಿದರು.
ರಾಜ್ಯ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಮಾತನಾಡಿ, ಜನತೆ ತಮ್ಮ ದೈನಂದಿನ ಕಾರ್ಯವನ್ನು ಸೂರ್ಯೋದಯದೊಂದಿಗೆ ಆರಂಭಿಸಿ ಸೂರ್ಯಾಸ್ತದವರೆಗೂ ಜತೆಯಾಗಿಯೇ ಕಳೆಯುತ್ತಾರೆ. ಆದರೆ, ಸೌರಶಕ್ತಿಯಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು ಎಂಬ ತಿಳಿವಳಿಕೆ ಪೂರ್ಣವಾಗಿ ಮೂಡಿಲ್ಲ. ಈ ನಿಟ್ಟಿನಲ್ಲಿ ಸೆಲ್ಕೋ ಕಂಪನಿ ದೇಶದಲ್ಲಿ ಕೈಗೊಂಡಿರುವ ಸಾಹಗಾಥೆ ಇತರರಿಗೆ ಪ್ರೇರಣೆ ನೀಡುವಂತಿದೆ ಎಂದು ಶ್ಲಾಸಿದರು.
ಜಾಗತಿಕ ಮಟ್ಟದಲ್ಲಿ ರಾಜ್ಯದ ಸಾಧನೆ ಸದ್ದು:
ಕ್ರೆಡೆಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಮಾತನಾಡಿ, ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲೇ 4ನೇ ಸ್ಥಾನವನ್ನು ಪಡೆದಿದೆ. ಇದೇ ರೀತಿ ಕರ್ನಾಟಕ ಕೂಡ ಇತರ ರಾಜ್ಯಗಳಿಂದ ಮುಂದಿದ್ದು, ಪ್ರಸ್ತುತ ಶೇ.64 ಪ್ರಮಾಣದಷ್ಟು ನವೀಕರಿಸಬಹುದಾದ ಇಂಧನ ಬಳಸುತ್ತಿದೆ. ಪಾವಗಡ ಸೋಲಾರ್ ಪಾರ್ಕ್‌ನಿಂದಾಗಿ ರಾಜ್ಯದ ಸಾಧನೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದೆ. ಸುಸ್ಥಿರ ಇಂಧನದ ಮೂಲಕ ಬಡತನ ನಿವಾರಣೆಯಲ್ಲಿ ತೊಡಗಿಸಿಕೊಂಡಿರುವ ಸೆಲ್ಕೋ ಕಂಪನಿಯೊಂದಿಗೆ ಕ್ರೆಡೆಲ್ ಸಹಭಾಗಿತ್ವ ಹೊಂದಲು ಸಿದ್ಧವಿದೆ ಎಂದರು.
ಸಮಾರಂಭದಲ್ಲಿ ಸೆಲ್ಕೋ ಇಂಡಿಯಾದ ನಿರ್ದೇಶಕರಾದ ಎಲಿನಾ ಕ್ಯಾಸಲೋರಿ, ಥಾಮಸ್ ಪುಲ್ಲೆಂಕೇವ್, ಸಿಇಒ ಮೋಹನ್ ಭಾಸ್ಕರ್ ಹೆಗಡೆ, ಸೆಲ್ಕೋ ಫೌಂಡೇಷನ್‌ನ ಸಹ ನಿರ್ದೇಶಕಿ ರಚಿತಾ ಮಿಶ್ರಾ, ಮುಖ್ಯ ಹಣಕಾಸು ಅಧಿಕಾರಿ ವಿ.ಕೆ. ಜೋಬಿ ಹಾಜರಿದ್ದರು.
ಸುಸ್ಥಿತ ಇಂಧನ ಬಳಕೆಯನ್ನು ವಿಕೇಂದ್ರೀಕರಿಸುವುದರಿಂದ ವಿವಿಧ ವಿಭಾಗಗಳಲ್ಲಿ ಗುರುತರ ಬದಲಾವಣೆ ಕಾಣಲು ಸಾಧ್ಯವಿದೆ. ಶಿಶುಮರಣ, ಬಡತನ ನಿವಾರಣೆ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಬಳಸಿಕೊಂಡು ಪರಿಹಾರ ಪಡೆಯಬಹುದು. ಮುಖ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ನಗರ-ಗ್ರಾಮೀಣರ ಕಂದಕ ನಿವಾರಿಸಿ ಸಮಾನ ಅವಕಾಶ ಕಲ್ಪಿಸಲು ಸೌರಶಕ್ತಿ ವರದಾನವಾಗಿದೆ.
- ಡಾ. ಹರೀಶ್ ಹಂದೆ, ಸೆಲ್ಕೋ ಫೌಂಡೇಷನ್ ಸಿಇಒ