

ಹರಿಪ್ರಸಾದ್ ನಂದಳಿಕೆ ಕಾರ್ಕಳ
ರೈತರು ಬಹುತೇಕ ಕೃಷಿ ಚಟುವಟಿಕೆಗಳನ್ನು ಆಧುನಿಕ ಯಂತ್ರಗಳ ಮೂಲಕ ನಡೆಸಿದರೆ ಬೀಜ ಬಿತ್ತನೆ ಮಾತ್ರ ಸಾಂಪ್ರದಾಯಿಕ ವಿಧಾನದ ಮೂಲಕ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಮಾಡಲಾಗುತ್ತದೆ. ಇದೀಗ ಬೀಜ ಬಿತ್ತನೆಗೂ ಯಂತ್ರವೊಂದನ್ನು ವಿದ್ಯಾರ್ಥಿಗಳ ತಂಡ ತಯಾರಿಸಿದ್ದ್ದು, ಕಾರ್ಮಿಕರ ಕೊರತೆ ಕಾಡುತ್ತಿರುವ ಕಾಲದಲ್ಲಿ ರೈತರಿಗೆ ಇದು ವರದಾನವಾಗಿದೆ.
ಉಡುಪಿ ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಈ ನೂತನ ಬೀಜ ಬಿತ್ತನೆ ಯಂತ್ರ ತಯಾರಿಸಿದ್ದಾರೆ. ಅಂತಿಮ ವರ್ಷದ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಐಶ್ವರ್ಯಾ ಕಿರಣ್, ಗುರುಕಿರಣ್, ಲಿಖಿತ್ ಎರ್ಮಾಳ್ ಅವರು ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಡಾ.ರಾಜಾ ಯತೀಶ್ ಯಾದವ್ ನೇತೃತ್ವದಲ್ಲಿ ಸೌರಶಕ್ತಿ ಚಾಲಿತ ಬೀಜ ಬಿತ್ತನೆ ಯಂತ್ರ ಅಭಿವೃದ್ಧಿ ಪಡಿಸಿದ್ದಾರೆ.
ಕಡಿಮೆ ಅವಧಿಯಲ್ಲಿ ಬಿತ್ತನೆ: ರೈತರು ಕೃಷಿ ಭೂಮಿಯಲ್ಲಿ ಬೀಜಗಳನ್ನು ಬಿತ್ತಲು ಸಾಂಪ್ರದಾಯಿಕ ವಿಧಾನ ಬಳಸುತ್ತಿದ್ದು, ಕೈಯಿಂದ ಬೀಜ ಬಿತ್ತಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಹಾಗೂ ಕಾರ್ಮಿಕರ ಕೊರತೆಯೂ ಇದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ವಿದ್ಯಾರ್ಥಿಗಳು ಸ್ವಯಂಚಾಲಿತ ಬಿತ್ತನೆ ಬೀಜ ಯಂತ್ರವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಯಂತ್ರದ ಬಳಕೆ ಮೂಲಕ ರೈತರು ಕಡಿಮೆ ಅವಧಿಯಲ್ಲಿ ಹೆಚ್ಚು ಎಕರೆ ಪ್ರದೇಶದಲ್ಲಿ ಬೀಜ ಬಿತ್ತನೆ ಮಾಡಲು ಸಾಧ್ಯವಿದೆ. ಅಲ್ಲದೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭವನ್ನೂ ಪಡೆಯಬಹುದು.
ಯಂತ್ರದ ವೈಶಿಷ್ಟೃಗಳು: ಈ ಯಂತ್ರದಲ್ಲಿ ಬೀಜವನ್ನು ಮಣ್ಣಿನಲ್ಲಿ ಹಾಕುವ ಮೊದಲು 4 ಸೆಂ.ಮೀ. ಆಳಕ್ಕೆ ಮಣ್ಣನ್ನು ಅಗೆಯಲು ಅವಕಾಶವಿದೆ. ಬಿತ್ತನೆಯೊಂದಿಗೆ ನೀರು ಮತ್ತು ದ್ರವ ಗೊಬ್ಬರಗಳನ್ನು ಸಿಂಪಡಿಸುವುದು ಈ ಯಂತ್ರದ ಮತ್ತೊಂದು ವೈಶಿಷ್ಟೃವಾಗಿದೆ. ನೆಲಗಡಲೆ ಬೆಳೆಯುವ ರೈತರಿಗೆ ಇದು ಹೆಚ್ಚು ಸೂಕ್ತವಾಗಿದೆ. ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಮತ್ತು ಉಪ ಪ್ರಾಂಶುಪಾಲ ಡಾ.ಗಣೇಶ್ ಐತಾಳ್ ಅಭಿನಂದಿಸಿದ್ದಾರೆ.
ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ ಬಿತ್ತನೆ ಬೀಜ ಯಂತ್ರ ಯಾವುದೇ ಇಂಧನ ಹಾಗೂ ವಿದ್ಯುತ್ ಸಂಪರ್ಕ ಹೊಂದಿರದೆ ನೈಸರ್ಗಿಕವಾಗಿ ದೊರಕುವ ಸೌರಶಕ್ತಿ ಬಳಸಿಕೊಂಡು ರೈತರು ಸುಲಭವಾಗಿ ಉಪಯೋಗಿಸಬಹುದಾಗಿದೆ. ಸೌರಶಕ್ತಿ ಚಾಲಿತ ಬ್ಯಾಟರಿ ಉಪಯೋಗಿಸುವುದರಿಂದ ಪರಿಸರ ಸ್ನೇಹಿಯಾಗಿದೆ.
ಬೀಜ ಬಿತ್ತನೆಗೆ ಕೂಲಿ ಕಾರ್ಮಿಕರ ಕೊರತೆ ಹಾಗೂ ರೈತರ ಕಷ್ಟವನ್ನು ಗಮನಿಸಿ ವಿದ್ಯಾರ್ಥಿಗಳು ಯಂತ್ರ ತಯಾರು ಮಾಡಿದ್ದಾರೆ. ಇಂದು ಕೃಷಿಕರಿಗೆ ಉಪಯೋಗವಾಗುತ್ತದೆ. ವಿದ್ಯಾರ್ಥಿಗಳ ಈ ಆವಿಷ್ಕಾರ ಶ್ಲಾಘನೀಯ. ಡಾ.ತಿರುಮಲೇಶ್ವರ ಭಟ್, ಕಾಲೇಜಿನ ಪ್ರಾಂಶುಪಾಲ ಸೌರಶಕ್ತಿ ಬಳಸಿ ಯಂತ್ರ ಕಾರ್ಯಾಚರಿಸಲಿದೆ. ಅತೀ ವೇಗವಾಗಿ ಹೆಚ್ಚು ಎಕರೆ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮಾಡಲು ಸಾಧ್ಯವಿದೆ. ಕೂಲಿ ಕಾರ್ಮಿಕರ ಕೊರತೆಯೂ ನೀಗಲಿದೆ. ನೆಲಗಡಲೆ ಬಿತ್ತನೆ ಮಾಡುವ ರೈತರಿಗೆ ಹೆಚ್ಚು ಅನುಕೂಲವಾಗಿದೆ. ಐಶ್ವರ್ಯಾ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ https://www.vijayavani.net/school-centenary-pre-meeting https://www.vijayavani.net/handover-of-shadow-project-houses-in-bantwadi