

ಮೂಡುಬಿದಿರೆ: ಪಡುಮಾರ್ನಾಡು ಗ್ರಾ.ಪಂ.- ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಅಪಘಾತ ವಲಯದಲ್ಲಿ ಜನತಾ ವಿವಿಧೋದ್ದೇಶ ಸಹಕಾರ ಸಂಘದಿಂದ ಸೋಲಾರ್ ದೀಪ ಅಳವಡಿಸಲಾಯಿತು.
ಪಡುಮಾರ್ನಾಡು ಗ್ರಾ.ಪಂ. ಅಧ್ಯಕ್ಷ ವಾಸುದೇವ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಪ್ರದೇಶವು ತಿರುವುಗಳಿಂದ ಕೂಡಿದ್ದು, ಹೆಚ್ಚು ಅಪಾಯಕಾರಿಯಾಗಿದೆ. ಚರಂಡಿಯಲ್ಲಿ ಹೂಳು ತುಂಬಿದ್ದು, ಮಳೆಗಾಲದಲ್ಲಿ ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆ ಪಾಲಾಗುತ್ತಿದೆ. ವಾಹನ ಚಾಲಕ, ಸವಾರರು ಹರಸಾಹಸ ಪಟ್ಟು ರಸ್ತೆಯಲ್ಲಿ ಸಂಚರಿಸುವ ಅನಿವಾರ್ಯತೆ ಇರುವುದು ಗಮನಕ್ಕೆ ಬಂದಿದೆ. ರಾತ್ರಿ ಹೊತ್ತಲ್ಲಿ ಅಪಘಾತ ನಿಯಂತ್ರಿಸಲು ಸಹಕಾರಿ ಸಂಘವು ಕೊಡುಗೆಯಾಗಿ ನೀಡಿದ ಸೋಲಾರ್ ದೀಪ ಸಹಕಾರಿ ಎಂದರು.
ಸಹಕಾರ ಸಂಘದ ಅಧ್ಯಕ್ಷ ಎಂ.ದಯಾನಂದ ಪೈ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಉಮಾವತಿ ವಂದಿಸಿದರು.