ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಇನ್ನೂ 15 ದಿನಗಳೊಳಗೆ ಸೋಲಾರ್ ಬಲ

Solar
Published on

ರಾಜ್ಯದ 6,021 ಗ್ರಾಮ ಪಂಚಾಯಿತಿಗಳು ಇನ್ನೂ 15 ದಿನಗಳೊಳಗೆ ಸೋಲಾರ್ ಬಲ ಹೊಂದಲಿದ್ದು, ಗ್ರಾಪಂ ಸೇವೆಗಳು ಜನರಿಗೆ ಸುಸೂತ್ರವಾಗಿ ಲಭಿಸಲೆಂದು ಸರ್ಕಾರ ಈ ಕ್ರಮವಹಿಸಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದರು. ಮೇಲ್ಮನೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಎಸ್.ರವಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸಚಿವರು, ವಿದ್ಯುತ್ ಪೂರೈಕೆ ವ್ಯತ್ಯಯದಿಂದ ಏನೆಲ್ಲ ತೊಂದರೆಗಳಾಗುತ್ತಿವೆ ಎನ್ನುವುದು ಗಮನಕ್ಕಿದ್ದ ಕಾರಣ ಸೋಲಾರ್ ಸವಲತ್ತು ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು.

ಈಗಾಗಲೇ ಪರಿಣತ ಸಂಸ್ಥೆ ಹಾಗೂ ಉತ್ತಮ ಗುಣಮಟ್ಟದ ಸೋಲಾರ್ ಸಲಕರಣೆ ಖರೀದಿಗಾಗಿ ಮಾತುಕತೆ ನಡೆದಿದ್ದು, ಆಸಕ್ತ ಸಂಸ್ಥೆಗಳು 5 ಲಕ್ಷ ರೂ.ವರೆಗೆ ದರ ಸೂಚಿಸಿವೆ. 3 ಲಕ್ಷ ರೂ. ಮಿತಿಯೊಳಗೆ ಉತ್ತಮ ಗುಣಮಟ್ಟದವುಗಳನ್ನು ಖರೀದಿಸಬೇಕು ಎನ್ನುವುದು ಸರ್ಕಾರದ ದೃಢ ನಿಲುವಾಗಿದೆ. ಈ ಸಾಮಗ್ರಿ ಪೂರೈಸಿದ ಸಂಸ್ಥೆಗಳಿಗೆ ನಿರ್ವಹಣೆ ಜವಾಬ್ದಾರಿ ವಹಿಸಲಿದ್ದು, ಒಟ್ಟು ಬಿಲ್ ಮೊತ್ತದಲ್ಲಿ ಒಂದಿಷ್ಟು ಹಿಡಿದಿಟ್ಟುಕೊಳ್ಳಲಾಗುವುದು. ಅನೇಕ ಪಂಚಾಯಿತಿಗಳಿಗೆ 3 ಲಕ್ಷ ರೂ. ತುಂಬಿ ಕೊಡಲು ಆರ್ಥಿಕವಾಗಿ ಸಶಕ್ತವಾಗಿಲ್ಲದ ಕಾರಣ ವಿವೇಚನಾ ನಿಧಿಯಡಿ ನೆರವು ನೀಡುವಂತೆ ಆಯಾ ಶಾಸಕರಿಗೆ ವಿನಂತಿಸಲಾಗಿದೆ ಎಂದು ವಿವರಿಸಿದರು.

ತಿದ್ದುಪಡಿ ಉದ್ದೇಶ: ಸಿಬ್ಬಂದಿ ನೇಮಕದಲ್ಲಿ ಮೀಸಲು ಪಾಲನೆ, ಡೇಟಾ ಎಂಟ್ರಿ ಆಪರೇಟರ್​ಗಳನ್ನು ಸರಿದಾರಿಗೆ ತರುವುದು ಸೇರಿ ಪಂಚಾಯತ್ ವ್ಯವಸ್ಥೆ ಬಲವರ್ಧನೆಗೆಂದು ಪಂಚಾಯತ್​ರಾಜ್ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ ಎಂದು ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು. ಹಾಗೆಯೇ 1,000 ಗ್ರಾಪಂಗಳಲ್ಲಿ ಬಿಎಸ್​ಎನ್​ಎಲ್ ಇಂಟರ್​ನೆಟ್ ಸರಿಯಿಲ್ಲದ ಕಾರಣ ಏರ್​ಟೆಲ್ ಅಥವಾ ಜಿಯೋ ವ್ಯವಸ್ಥೆ ಮಾಡುವ ಚಿಂತನೆ ನಡೆದಿದೆ ಎಂದರು. ಆರ್.ಪ್ರಸನ್ನಕುಮಾರ್ ಪರ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಕುಡಿಯುವ ನೀರಿನ ಶುದ್ಧ ಘಟಕಗಳ ಕುರಿತು ಚರ್ಚೆಗೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುತ್ತಿರುವ 25 ಎಂಎಲ್​ಸಿಗಳ ವಿಶೇಷ ಸಭೆ ಕರೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ರೈತರಂತೆ ಈ ಎಂಎಲ್​ಸಿಗಳು ಧ್ವನಿಯಿಲ್ಲದವರು ಎಂದು ಈಶ್ವರಪ್ಪ ಹೇಳಿದಾಗ, ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಈ ನಿರ್ಧಾರ ಸಮರ್ಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net