ಕಾಡು ಪ್ರಾಣಿಗಳ ಹಾವಳಿ ತಡೆಗೆ ಸೌರಶಕ್ತಿ ಬೇಲಿ ಸಹಕಾರಿ

6 koushik
Published on

ಬಾಳೆಹೊನ್ನೂರು: ಕಾಡು ಪ್ರಾಣಿಗಳ ಹಾವಳಿ ತಡೆಯಲು ರೈತರ ಜಮೀನುಗಳಿಗೆ ಸೌರಶಕ್ತಿ ಬೇಲಿ ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ಸಹಾಯ ಧನದಡಿ ಯೋಜನೆಯನ್ನು ಜಾರಿ ತಂದಿದ್ದು ರೈತರು, ಬೆಳೆಗಾರರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಎನ್.ಆರ್.ಪುರ ಪಿಸಿಎಆರ್‌ಡಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಸ್.ಕೌಶಿಕ್ ಪಟೇಲ್ ತಿಳಿಸಿದ್ದಾರೆ.

ಮಲೆನಾಡು ಭಾಗದಲ್ಲಿ ವನ್ಯ ಪ್ರಾಣಿಗಳ ಹಾವಳಿ ಮಿತಿ ಮೀರಿದ್ದು, ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಸಂರಕ್ಷಿಸಿಕೊಳ್ಳುವುದು ದುಸ್ಸಾಹಸದ ಮಾತಾಗಿದೆ. ಈ ಹಿನ್ನೆಲೆಯಲ್ಲಿ ರೈತರ ಸಂಕಷ್ಟವನ್ನು ಅರಿತ ಸರ್ಕಾರ ಸಮುದಾಯ ಸೌರಶಕ್ತಿ ಬೇಲಿಯನ್ನು 50:50ರ ಸಹಾಯಧನದ ಅನುಪಾತದಲ್ಲಿ ನಿರ್ಮಿಸಿಕೊಳ್ಳಲು ಅವಕಾಶ ನೀಡಿದೆ.

ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳಿಂದ ರೈತರು ಕೃಷಿ ಜಮೀನುಗಳಿಗೆ ಕೆಲಸ ಕಾರ್ಯಗಳಿಗೆ ತೆರಳಿದ ಸಂದರ್ಭದಲ್ಲಿ ದಾಳಿ, ಸಾವು ನೋವು ಮುಂತಾದವು ಸಂಭವಿಸಿರುತ್ತದೆ. ಹಲವರ ಬೆಳೆ ನಷ್ಟವೂ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ತಡೆಗಟ್ಟಲು ಸಹಾಯಧನದ ಯೋಜನೆಯಡಿ ಸೌರಶಕ್ತಿ ಬೇಲಿ ನಿರ್ಮಿಸಿಕೊಳ್ಳಲು ಯೋಜನೆ ರೂಪಿಸಿದೆ.

ಶೇ.50:50 ಅನುಪಾತದಲ್ಲಿ ಸೌರಶಕ್ತಿ ಬೇಲಿ ನಿರ್ಮಿಸಿಕೊಳ್ಳಲು ಈಗಾಗಲೇ ಆದೇಶ ಜಾರಿಗೆ ತಂದಿದ್ದು, ಯೋಜನೆ ಮಾಡಿಕೊಳ್ಳುವ ರೈತರು ಅರಣ್ಯ ಇಲಾಖೆಯನ್ನು ನೇರವಾಗಿ ಸಂಪರ್ಕಿಸಬಹುದು. ಕಾಮಗಾರಿಗಳಿಗೆ ಆದ ವೆಚ್ಚದ ಬಾಬ್ತು ಸಹಾಯಧನವನ್ನು ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net