

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ತಾಲೂಕಿನ ಸೋಲದೇವನಹಳ್ಳಿ ಗ್ರಾಪಂನ ಮಂಟನಕುರ್ಚಿ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶಶಿಧರ್, ಉಪಾಧ್ಯಕ್ಷರಾಗಿ ಮಂಜಣ್ಣ ಆಯ್ಕೆಯಾದರು.
ಡೇರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಸ್.ಜಿ.ಶಶಿಧರ್ 6 ಮತ ಪಡೆದು ವಿಜೇತರಾದರು. ಪ್ರತಿ ಸ್ಪರ್ಧಿ ಮುನಿರಾಜು 4 ಮತ ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಮಂಜಣ್ಣ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ಎಂದು ಚುನಾವಣಾಧಿಕಾರಿ ಭಾಸ್ಕರ್ ೋಷಿಸಿದರು.
ನೂತನ ಅಧ್ಯಕ್ಷ ಎಸ್.ಜಿ.ಶಶಿಧರ್ ಮಾತನಾಡಿ, ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತಗೆದುಕೊಂಡು ಬಮುಲ್‌ನಿಂದ ದೊರೆಯುವ ಸೌಲಭ್ಯವನ್ನು ರೈತರಿಗೆ ದೊರಕಿಸಿಕೊಡುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಮುಖಂಡ ಭವಾನಿಶಂಕರ್ ಬೈರೇಗೌಡ ಮಾತನಾಡಿ, ಚುನಾವಣೆ ಎಂಬುದು ನೆಪ ಮಾತ್ರ. ಅಧಿಕಾರ ಪಡೆದುಕೊಂಡ ಬಳಿಕ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತಗೆದುಕೊಂಡರೆ ಮಾತ್ರ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ. ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಮಹತ್ವದ ಪಾತ್ರವಹಿಸುತ್ತಿವೆ ಎಂದರು.
ಸಕಾಲಕ್ಕೆ ಮಳೆಯಾಗದೆ ಕೃಷಿ ಚಟುವಟಿಕೆಗಳು ಹಿನ್ನಡೆಯಾಗುತ್ತಿರುವ ಸನ್ನಿವೇಶದಲ್ಲಿ ರೈತ ಕುಟುಂಬಗಳನ್ನು ಹೈನುಗಾರಿಕೆ ಕೈಹಿಡಿದಿದೆ. ಆದ್ದರಿಂದ ಹಾಲು ಉತ್ಪಾದನೆಯಲ್ಲಿ ಗುಣಮಟ್ಟ, ಸ್ವಚ್ಛತೆ ಕಾಯ್ದಕೊಳ್ಳಬೇಕು. ರೈತರು ಹೈನುಗಾರಿಕೆಯಿಂದ ಸಾಕಷ್ಟು ಅನುಕೂಲ ಪಡೆದುಕೊಂಡಿದ್ದು, ಮುಂದೆಯೂ ಹೆಚ್ಚು ಹಾಲು ಉತ್ಪಾದಿಸಿ ಮತ್ತಷ್ಟು ಅಭಿವೃದ್ಧಿ ಕಾಣಬೇಕು ಎಂದರು.
ಬೆಂಗಳೂರು ಸಹಕಾರಿ ಯುನಿಯನ್ ನಿರ್ದೇಶಕ ಜಗದೀಶ್, ಹಂಚೀಪುರ ಡೇರಿ ಅಧ್ಯಕ್ಷ ವಿಜಯ್‌ಕುಮಾರ್, ಕಾರ್ಯದರ್ಶಿ ಅಂಜನಾಮೂರ್ತಿ, ಗುರುವನಹಳ್ಳ ಡೇರಿ ಕಾರ್ಯದರ್ಶಿ ರಾಜಗೋಪಾಲ್, ಮಂಟನಕುರ್ಚಿ ಹಾಲು ಉತ್ಪಾದಕ ಸಹಕಾರ ಸಂಘದ ಉಪಾಧ್ಯಕ್ಷ ಮಂಜಣ್ಣ, ನಿರ್ದೇಶಕ ಸುಬ್ಬಯ್ಯ, ಮುನಿವೆಂಕಟಯ್ಯ, ಜಯಣ್ಣ, ವರದಯ್ಯ, ಮುನಿಯಪ್ಪ, ಎಂ.ಮುನಿರಾಜು, ಸುಧಾ, ಕಾರ್ಯದರ್ಶಿ ದೇವರಾಜು ಮತ್ತಿತರರು ಉಪಸ್ಥಿತರಿದ್ದರು.