ಗಿಡ ಮರ ಬೆಳೆಸಿದರೆ ನೆಲ-ಜಲ ರಕ್ಷಣೆ

9 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಅರಣ್ಯದಲ್ಲಿ ಪ್ರಾಣಿ, ಪಗಳು ವೈದ್ಯಕೀಯ ಉಪಚಾರವಿಲ್ಲದೆ ಆರೋಗ್ಯದಿಂದ ಬದಕುತ್ತವೆ. ಇದಕ್ಕೆ ಕಾರಣ ನಿಸರ್ಗ. ನಿಸರ್ಗದೊಂದಿಗೆ ನಮ್ಮ ಜೀವನವನ್ನು ಸಮ್ಮಿಳಿತ ಮಾಡಿದರೆ, ನಿಸರ್ಗ ರೋಗ ನಿರೋಧಕ ಶಕ್ತಿ ಕೊಡುತ್ತದೆ. ಮರಗಳು ಭೂಮಿಯ ಫಲವತ್ತತೆ ಹೆಚ್ಚಿಸುವುದಲ್ಲದೆ ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಚ್ಚಿಸುತ್ತವೆ ಎಂದು ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ ಗೋಗಿ ಹೇಳಿದರು.
ನಗರದ ವಾಲ್ಮಿ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಣೆಕಟ್ಟು ಪ್ರದೇಶದ ಮೇಲ್ಭಾಗದ ಪ್ರದೇಶದಲ್ಲಿ ಅರಣ್ಯದ ಮಹತ್ವ ಹೆಚ್ಚಾಗಿದೆ. ಮಳೆ ನೀರು ಹರಿದು ಬರುವಾಗ ಮೇಲ್ಮಣ್ಣನ್ನೂ ಹೊತ್ತು ತರುವುದರಿಂದ ಆಣೆಕಟ್ಟೆಗಳಲ್ಲಿ ಹೂಳಿನ ಪ್ರಮಾಣ ಹೆಚ್ಚಾಗಿ ಯೋಜನೆಯ ಉದ್ದೇಶ ಈಡೇರುವುದಿಲ್ಲ. ಹೀಗಾಗಿ ಹೆಚ್ಚು ಮರಗಳನ್ನು ನೆಡುವುದರ ಮೂಲಕ ನೀರಿನ ಹರಿವಿನ ವೇಗ ತಗ್ಗಿಸಿ ಭೂಮಿಯ ರಕ್ಷಣೆ ಮಾಡಬಹುದು ಎಂದರು.
ವೃಕ್ಷಗಳು ಬರೀ ವೃಕ್ಷ ಗಳಲ್ಲ. ಅವು ದೇವರು ಕೊಟ್ಟ ವರಗಳು. ಸೃಷ್ಟಿಯಲ್ಲಿನ ಎಲ್ಲ ಜೀವರಾಶಿ ಜತೆಗೆ ಸಹಬಾಳ್ವೆ ಮಾಡಬೇಕಾದರೆ ನಾವು ಬದುಕುವುದರ ಜತೆಗೆ ಇತರೆ ಜೀವಿಗಳು ಬದುಕಲು ಅವಕಾಶ ಮಾಡಿಕೊಡಬೇಕು. ಅದಕ್ಕಾಗಿ ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳೆಸಬೇಕು ಎಂದರು.
ವಾಲ್ಮಿ ಸಂಸ್ಥೆ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಮಾತನಾಡಿ, ಭಾರತೀಯರು ನಿಸರ್ಗ, ಭೂತಾಯಿಯನ್ನು ದೈವತ್ವಕ್ಕೆ ಹೋಲಿಸಿ ನಿಸರ್ಗಕ್ಕನುಗುಣವಾಗಿ ಸುಸ್ಥಿರ ಜೀವನ ನಡೆಸುತ್ತಿದ್ದರು. ಈಗ ನಾವು ಸುಸ್ಥಿರ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟು ನೆಲ-ಜಲ ನಿಸರ್ಗದ ಕುರಿತು ಚಿಂತನ ಮಂತನ ಮಾಡುವ ಅಗತ್ಯವಿದೆ ಎಂದರು.
ಶಾಂತವೀರ ಶಿವಪ್ಪ ಮಾತನಾಡಿದರು. ವಲಯ ಅರಣ್ಯ ರಕ್ಷಣಾಧಿಕಾರಿ ಪ್ರದೀಪ ಪವಾರ, ರಾಷ್ಟ್ರೀಯ ವಿಧಿ ವಿಜ್ಞಾನ ವಿವಿ ನಿರ್ದೇಶಕ ಡಾ. ಮಂಜುನಾಥ ಘಾಟೆ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಮತ್ತು ಜಲ ಸಂಪನ್ಮೂಲ ಇಲಾಖೆ ಅಭಿಯಂತರರು, ವಾಲ್ಮಿ ಸಂಸ್ಥೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net