ಗ್ರಾಪಂ ಮಟ್ಟದಲ್ಲಿ ಮಣ್ಣು ಸಂಸ್ಕರಣಾ ಘಟಕ

11 Dwd 1
Published on

ಧಾರವಾಡ: ರಾಜ್ಯದೆಲ್ಲೆಡೆ ಕಳೆದ ವರ್ಷಕ್ಕಿಂತ ಶೇ. 25ರಷ್ಟು ಅಧಿಕ ಮಳೆಯಾಗಿದೆ. ಉತ್ತರ ಕರ್ನಾಟಕದ ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳ ಕೆಲವು ಪ್ರದೇಶಗಳಲ್ಲಿ ಪ್ರವಾಹದಿಂದ ಹಾನಿಯಾಗಿದೆ. ರೈತರ ಆತ್ಮಹತ್ಯೆಗೆ ನೀರಾವರಿ, ಕೃಷಿ ಸಮಸ್ಯೆಗಳು ಕಾರಣವಾಗಬಾರದು. ಆಹಾರ ಸಂಸ್ಕರಣೆ ಘಟಕಗಳಿಗೆ ಪ್ರಧಾನ ಮಂತ್ರಿಯವರು ಆತ್ಮನಿರ್ಭರ ಯೋಜನೆಯಡಿ 10 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದು, ಅರ್ಹರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ನಗರದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವವಿದ್ಯಾಲಯದ 34ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಹಾರ ಸಂಸ್ಕರಣೆ ಘಟಕಗಳ ಸ್ಥಾಪನೆಯಿಂದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತದೆ. ಸ್ಥಳೀಯವಾಗಿ ಉದ್ಯೋಗವೂ ಸಾಧ್ಯವಾಗುತ್ತದೆ ಎಂದರು.

1986ರಲ್ಲಿ ಸ್ಥಾಪನೆಯಾದ ಧಾರವಾಡ ಕೃಷಿ ವಿವಿ 34 ವರ್ಷಗಳಲ್ಲಿ ಪ್ರಮುಖ ಸಾಧನೆಯ ಗರಿಗಳನ್ನು ಮುಡಿಗೇರಿಸಿಕೊಂಡಿದೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಸಾಧನೆ ಮಾಡುತ್ತಿದ್ದಾರೆ. ದೇಶದ ಉತ್ತಮ ಸಾವಿರ ವಿವಿಗಳಲ್ಲಿ ಧಾರವಾಡ ಕೃಷಿ ವಿವಿ 83ನೇ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ ಎಂದರು.

=ಪ್ರಶಸ್ತಿ ಪ್ರದಾನ: ಕೃಷಿಯಲ್ಲಿ ಬೋಧನೆ, ಸಂಶೋಧನಾ ಕ್ಷೇತ್ರದಲ್ಲಿ ಸಾಧನೆಗೈದಿರುವ 76 ಗಣ್ಯರಿಗೆ, ಕೃಷಿ ವಿವಿ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗೆ ಪ್ರಶಸ್ತಿಗಳನ್ನು ನೀಡಿ ಸಚಿವರು ಗೌರವಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಮಹಾದೇವ ಚೆಟ್ಟಿ ಮಾತನಾಡಿ ಬೀಜೋತ್ಪಾದನೆ, ಕೃಷಿ ತಂತ್ರಜ್ಞಾನ ಅಳವಡಿಸಿಕೊಂಡು ಪ್ರಧಾನಮಂತ್ರಿಯವರ ಮಹತ್ವಾಕಾಂಕ್ಷೆಯ ಆತ್ಮನಿರ್ಭರ ಯೋಜನೆ ಜಾರಿಗೊಳಿಸಲಾಗುತ್ತಿದೆ. ಕೃಷಿ ಸಚಿವರ ಆಶಯದಂತೆ ವಿವಿಯು ಅಗ್ರಿ ವಾರ್ ರೂಂ ಸ್ಥಾಪಿಸಿ, ರೈತರಿಗೆ ನೆರವಾಗುತ್ತಿದೆ ಎಂದರು.

ಕೃಷಿ ವಿವಿಯ ಪ್ರಥಮ ಕುಲಪತಿ ಡಾ. ಜೆ.ವಿ. ಗೌಡ, ಆಡಳಿತ ಮಂಡಳಿ ಸದಸ್ಯರಾದ ಶಶಿಮೌಳಿ ಕುಲಕರ್ಣಿ, ವೈ.ಎನ್. ಪಾಟೀಲ, ಪಿ. ಮಲ್ಲೇಶ, ಡಾ. ಎಸ್.ಬಿ. ಕಲಘಟಗಿ, ಎಲ್.ಎಸ್. ಅಜಗಣ್ಣನವರ, ಡಾ. ಎಸ್.ಬಿ. ಹೊಸಮನಿ, ಕುಲಸಚಿವ ಡಾ. ವಿ.ಆರ್. ಕಿರೇಸೂರ, ಇತರರು ಉಪಸ್ಥಿತರಿದ್ದರು. ಯಲ್ಲಪ್ಪ ಮಾಳಗಿ ಮತ್ತು ಸಂಗಡಿಗರು ರೈತಗೀತೆ ಪ್ರಸ್ತುತಪಡಿಸಿದರು.

ನ್ಯೂಸ್ ಲೆಟರ್ ಬಿಡುಗಡೆ: ಯುನಿವರ್ಸಿಟಿ ಅಟ್ ಎ ಗ್ಲಾನ್ಸ್ ನ್ಯೂಸ್ ಲೆಟರ್, ಆತ್ಮನಿರ್ಭರ ಕಾರ್ಯಕ್ರಮ ಅನುಷ್ಠಾನ, ಕೃಷಿ ಉದ್ಯಮಶೀಲತೆ, ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಂಡ ಚಟುವಟಿಕೆಗಳ ಕಿರುಪುಸ್ತಕ, ಆಶಿಯಾನಾ ಕಾಫಿ ಟೇಬಲ್ ಪುಸ್ತಕ, ಬಿಟಿ ಹತ್ತಿಯಲ್ಲಿ ಐಸಿಎಂ ತಂತ್ರಜ್ಞಾನ ಹಾಗೂ ಸಮಗ್ರ ಸುಧಾರಣೆ ಕುರಿತ ಫೋಲ್ಡರ್, ವಿವಿಧ ತರಬೇತಿಗಳ ಡಿವಿಡಿ ಹಾಗೂ ಸ್ಟಾರ್ಟ್ ಅಪ್ ಪ್ರೊಜೆಕ್ ್ಟಳು, ಇಂಗ್ಲಿಷ್ ಕಲಿಕಾ ಲ್ಯಾಬ್ ಸಾಫ್ಟ್​ವೇರ್​ಗಳನ್ನು ಕೃಷಿ ಸಚಿವ ಬಿ.ಸಿ. ಪಾಟೀಲ ಬಿಡುಗಡೆಗೊಳಿಸಿದರು.

ವಿದ್ಯಾರ್ಥಿಗಳೊಂದಿಗೆ ವಿಡಿಯೋ ಸಂವಾದ: ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಅಂತಿಮ ವರ್ಷದ ಕೃಷಿ ಪದವಿ ವಿದ್ಯಾರ್ಥಿಗಳೊಂದಿಗೆ ಬುಧವಾರ ವಿಡಿಯೋ ಸಂವಾದ ನಡೆಸಿದರು. ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ರೈತರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು.ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ವಿಶ್ವವಿದ್ಯಾಲಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಕುಲಪತಿ ಡಾ. ಎಂ.ಬಿ. ಚೆಟ್ಟಿ ಅವರೊಂದಿಗೆ ವಿದ್ಯಾರ್ಥಿಗಳ ಜೊತೆ ವಿಡಿಯೋ ಸಂವಾದ ನಡೆಸಿದರು. ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಕೊನೆಯ 6 ತಿಂಗಳು ರೂರಲ್ ಅಗ್ರಿಕಲ್ಚರ್ ವರ್ಕ್ ಎಕ್ಸ್​ಪೀರಿಯನ್ಸ್ ಪ್ರೋಗ್ರಾಂ (ರಾವೆ) ಪಠ್ಯೇತರ ಚಟುವಟಿಕೆ ಇದೆ. ಅದರಡಿ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ರೈತರೊಂದಿಗೆ ಇದ್ದು ಅಲ್ಲಿನ ರೈತ ಸಂಪರ್ಕ ಕೇಂದ್ರಗಳ ಜೊತೆ ಸೇರಿ ಗ್ರಾಮೀಣ ಭಾಗದ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕೃಷಿ ಸಂಬಂಧಿತ ಹೊಸ ತಂತ್ರಜ್ಞಾನ ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್, ಮಣ್ಣು ಮತ್ತು ನೀರಿನ ಸಂರಕ್ಷಣೆ, ಸಮಗ್ರ ಕೃಷಿಗೆ ಒತ್ತು, ಸಾವಯವ ಕೃಷಿ ಹಾಗೂ ರೈತ ಬೆಳೆ ಸಮೀಕ್ಷೆ ಆಪ್ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net