ಮಣ್ಣು ಪರೀಕ್ಷಾ ಕಾರ್ಯಾಗಾರ : ಉಪ್ಪಿನಂಗಡಿ ಸಹಕಾರಿ ಮಹಾಸಭೆಯಲ್ಲಿ ಆಗ್ರಹ

Published on

ಉಪ್ಪಿನಂಗಡಿ: ರೈತರ ಪಾಲಿಗೆ ಅತ್ಯಗತ್ಯವಾಗಿರುವ ಮಣ್ಣಿನ ಸತ್ವ ತಿಳಿಯುವ ಮಣ್ಣು ಪರೀಕ್ಷಾ ಕಾರ್ಯಾಗಾರವನ್ನು ನಡೆಸಿ ಸಂಘದ ವ್ಯಾಪ್ತಿಯ ರೈತರಿಗೆ ಹಾಗೂ ಕೃಷಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಸದಸ್ಯರು ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆಯಲ್ಲಿ ಆಗ್ರಹಿಸಿದರು.

ಉಪ್ಪಿನಂಗಡಿಯಲ್ಲಿ ಭಾನುವಾರ ಸಂಘದ ಅಧ್ಯಕ್ಷ ಕೆ.ವಿ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಣ್ಣಿನ ಸತ್ವ ಪರೀಕ್ಷೆ ನಡೆಸುವ ಅನಿವಾರ್ಯತೆಯನ್ನು ಸದಸ್ಯರು ತಿಳಿಸಿದರು.

ಫಸಲು ಭಿಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಯೋಜನೆಗೆ ಬೆಳೆ ಸಮೀಕ್ಷೆ ಮಾಡುವವರು ಯಾರೆನ್ನುವುದು ಬಹಿರಂಗವಾಗುತ್ತಿಲ್ಲ. ಪ್ರತೀ ವರ್ಷ ಬೆಳೆ ಸಮೀಕ್ಷೆ ಮಾಡುವುದು ರೈತರನ್ನು ಮೋಸಗೊಳಿಸುವ ಸರ್ಕಾರ ಹುನ್ನಾರ ಎಂದು ಆರೋಪಿಸಿ, 5 ವರ್ಷಕ್ಕೊಮ್ಮೆ ಬೆಳೆ ಸಮೀಕ್ಷೆ ಮಾಡಿದರೆ ಸಾಕು ಎಂಬ ನಿರ್ಣಯ ಮಾಡೋಣ ಎಂದು ಸದಸ್ಯರಾದ ಲಕ್ಷ್ಮಣ ಗೌಡ, ಜಯಂತ ಪೊರೋಳಿ, ರೂಪೇಶ್ ರೈ ಅಲಿಮಾರ ಮತ್ತಿತರರು ಪ್ರಸ್ತಾಪಿಸಿದರು.

ಶೇ.20 ಡಿವಿಡೆಂಡ್‌ಗೆ ಒತ್ತಾಯ

ಪ್ರಸ್ತುತ ಸಾಲಿನಲ್ಲಿ ಸಂಘವು 3.50 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಆದರೆ ಡಿವಿಡೆಂಟ್ ಮಾತ್ರ 4 ವರ್ಷಗಳಿಂದ ಏರಿಕೆಯೇ ಆಗುತ್ತಿಲ್ಲ. ಈ ಬಾರಿ ಶೇ .20 ಡಿವಿಡೆಂಡ್ ನೀಡಬೇಕು ಎಂದು ಲಕ್ಷ್ಮಣ ಗೌಡ ನೆಡ್ಚಿಲ್, ಚಂದ್ರಶೇಖರ ತಾಳ್ತಜೆ, ವೆಂಕಟ್ರಮಣ ಭಟ್ ಪೆಲಪ್ಪಾರು, ರೂಪೇಶ್ ರೈ ಅಲಿಮಾರ್ ಮತ್ತಿತರರು ಆಗ್ರಹಿಸಿದರು. ಅಧ್ಯಕ್ಷರು ಇದಕ್ಕೆ ಸಮ್ಮತಿಸಲಿಲ್ಲ. ಕೊನೆಗೆ ಸದಸ್ಯರ ಆಗ್ರಹಕ್ಕೆ ಮಣಿದು ಶೇ.15 ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು.

ಸಂಘದ ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು, ಯಶವಂತ ಗುಂಡ್ಯ, ಜಗದೀಶ ರಾವ್ ಮಣಿಕ್ಕಳ, ರಾಜೇಶ್, ಯತೀಶ್ ಶೆಟ್ಟಿ, ರಾಮ ನಾಯ್ಕ, ಶ್ಯಾಮಲಾ ಶೆಣೈ, ದಯಾನಂದ ಎಸ್, ಕುಂಞ ಎನ್, ಸಚಿನ್ ಮುದ್ಯ, ಶರತ್ ಉಪಸ್ಥಿತರಿದ್ದರು. ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೋಭಾ ವರದಿ ವಾಚಿಸಿದರು. ಉಪಮುಖ್ಯಕಾರ್ಯನಿರ್ವಣಾಧಿಕಾರಿ ಪುಷ್ಪರಾಜ್ ಶೆಟ್ಟಿ ಎಚ್. ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net