

ಅರಕಲಗೂಡು: ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಲು ಮಣ್ಣು ಪರೀಕ್ಷೆ ಅತ್ಯಗತ್ಯ ಎಂದು ಬೆಂಗಳೂರು ಜಿಕೆವಿಕೆ ಕೃಷಿ ತಜ್ಞ ಡಾ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಮುಸವತ್ತೂರು ಗ್ರಾಮದ ಪ್ರಗತಿಪರ ಕೃಷಿಕ ರವಿಚಂದ್ರ ಅವರ ತೋಟದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರೈತ ವಿಜ್ಞಾನಿ ಸಂವಾದದಲ್ಲಿ ಮಾತನಾಡಿ, ಯಾವುದೇ ಬಹು ವಾರ್ಷಿಕ ಬೆಳೆ ಆಯ್ಕೆ ಮಾಡಿಕೊಳ್ಳುವ ಮುನ್ನ ರೈತರು ಆ ಬಗ್ಗೆ ಸೂಕ್ತ ಮಾಹಿತಿ ಪಡೆಯುವುದು ಅಗತ್ಯ. ಇತ್ತೀಚಿನ ದಿನಗಳಲ್ಲಿ ಅಡಕೆ ಬೆಳೆಗೆ ಕೃಷಿಕರು ಹೆಚ್ಚು ಒಲವು ತೋರುತ್ತಿದ್ದು, ಬೆಳೆ ಮಾಡುವ ಮುನ್ನ ಮಣ್ಣು ಪರೀಕ್ಷೆ, ಅಡಕೆ ತಳಿ ಕುರಿತು ಅಗತ್ಯ ಮಾಹಿತಿ ಪಡೆಯಬೇಕು. ಯಾವುದೇ ಬೆಳೆಯನ್ನು ನಾಟಿ ಮಾಡುವ ಮುನ್ನ ವೈಜ್ಞಾನಿಕವಾಗಿ ಮಾಡಬೇಕು. ಇಲ್ಲಿ ಸಣ್ಣ ವಿಷಯಗಳು ಕೂಡ ಬಹುಮುಖ್ಯವಾಗಿದ್ದು, ಇದರತ್ತ ಗಮನ ಹರಿಸಿದಾಗ ಒಳ್ಳೆಯ ಫಸಲು ಪಡೆಯಲು ಸಾಧ್ಯ ಎಂದರು.
ಹಾಸನದ ಕೃಷಿ ಕಾಲೇಜಿನ ವಿಜ್ಞಾನಿ ಡಾ.ಎಚ್.ಮಂಜುನಾಥ್ ಮಾತನಾಡಿ, ಬೆಳೆಗಳನ್ನು ರೋಗ ಹಾಗೂ ಕೀಟಗಳು ವ್ಯಾಪಕವಾಗಿ ಕಾಡುತ್ತಿದ್ದು, ಕೃಷಿಕರು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ತಿಳಿಸಿದರಲ್ಲದೆ, ತಾಲೂಕಿನಲ್ಲಿ ಬೆಳೆಯುವ ವಿವಿಧ ಬೆಳೆಗಳನ್ನು ಬಾಧಿಸುತ್ತಿರುವ ರೋಗಗಳ ಬಗ್ಗೆ ಮಾಹಿತಿ ನೀಡಿದರು.
ಮೈಸೂರಿನ ಪ್ರಗತಿಪರ ಕೃಷಿಕ ಟಿ.ರಾಮಕೃಷ್ಣ ತಾವು ಬೆಳೆಯುತ್ತಿರುವ ಆಸ್ಟ್ರೇಲಿಯನ್ ಬೀಜರಹಿತ ನಿಂಬೆ ಬೆಳೆಯ ಸುಧಾರಿತ ಬೇಸಾಯ ಕುರಿತು ಮಾಹಿತಿ ನೀಡಿದರು. ಆಸ್ಟ್ರೇಲಿಯನ್ ನಿಂಬೆ ದಪ್ಪ ಗಾತ್ರದಲ್ಲಿದ್ದು, ಹೆಚ್ಚು ಹುಳಿ ಇರುತ್ತದೆ. ಇದನ್ನು ಹೆಚ್ಚು ದಿನ ಇಡಬಹುದು ಹಾಗೂ ಇದಕ್ಕೆ ಹೆಚ್ಚು ಬೇಡಿಕೆ ಇದ್ದು ಮಾರುಕಟ್ಟೆಯೂ ಕೂಡ ಸುಲಭವಾಗಿದೆ. ಸುಮಾರು 18 ಎಕರೆಯಲ್ಲಿ ನಿಂಬೆ ಕೃಷಿ ನಡೆಸಿದ್ದು, ದಿನಕ್ಕೆ 50ರಿಂದ 60 ಸಾವಿರ ರೂ. ಆದಾಯ ಗಳಿಸುತ್ತಿರುವುದಾಗಿ ಹೇಳಿದರು.
ಪ್ರಗತಿಪರ ಕೃಷಿಕ ರವಿಚಂದ್ರ ತಮ್ಮ ಅನುಭವಗಳನ್ನು ಹಂಚಿಕೊಂಡರು. ಮೆಕ್ಸಿಕನ್ ಫ್ರೂಟ್ ಹಾಗೂ ಅಡಕೆ ಗಿಡ ನಾಟಿ ಪ್ರಾತ್ಯಕ್ಷಿಕೆ ನೀಡಲಾಯಿತು. ಆತ್ಮ ಯೋಜನೆಯ ಜಿಲ್ಲಾ ಪ್ರಶಸ್ತಿ ವೀಜೇತ ಕೃಷಿಕರಾದ ಹುಲಿಕಲ್ ಗ್ರಾಮದ ಬೇಲೂರೇಗೌಡ, ಕೊಣನೂರಿನ ಗೋವಿಂದೇಗೌಡ ಅವರನ್ನು ಸನ್ಮಾನಿಸಲಾಯಿತು. ಸಹಾಯಕ ಕೃಷಿ ನಿರ್ದೇಶಕ ರಮೇಶ್ ಕುಮಾರ್, ಹಾಸನ ಆಕಾಶವಾಣಿಯ ಮಧುಸೂದನ್ ಇತರರು ಇದ್ದರು.