ಎಲ್ಲ ತಾಲೂಕು ಕೇಂದ್ರದಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲಯ ಆರಂಭಿಸಲು ಸರ್ಕಾರ ನಿರ್ಧಾರ

21TMK_Disha_Meeting
Published on

ತುಮಕೂರು: ರೈತರಿಗೆ ಅನುಕೂಲವಾಗುವಂತೆ ಎಲ್ಲ ತಾಲೂಕು ಕೇಂದ್ರದಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲಯ ಆರಂಭಿಸಲು ಸರ್ಕಾರ ನಿರ್ಧರಿಸಿದ್ದು, ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸಂಸದ ಜಿ.ಎಸ್. ಬಸವರಾಜು ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನಾ ಅವರಿಗೆ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ದಿಶಾ’ ಸಭೆಯಲ್ಲಿ ಮಾತನಾಡಿ, ಮಣ್ಣು ಪರೀಕ್ಷೆಗಾಗಿ ಅಲೆದಾಟ ತಪ್ಪಿಸಲು ಮೊಬೈಲ್ ಮಣ್ಣು ಪರೀಕ್ಷಾ ಕೇಂದ್ರದ ಸೌಲಭ್ಯವನ್ನು ರೈತರಿಗೆ ಒದಗಿಸಬೇಕು ಎಂದು ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜ ಸುಲೋಚನಾ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ 5 ಮಣ್ಣು ಪರೀಕ್ಷಾ ಕೇಂದ್ರಗಳನ್ನು ತೆರೆಯಲು ಅವಕಾಶವಿದ್ದು, ವಿಜ್ಞಾನ ಪದವಿ ಹೊಂದಿದ, ಎನ್‌ಜಿಒ, ಎಫ್‌ಪಿಒಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಈವರೆಗೆ 30 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಜಿಲ್ಲಾಮಟ್ಟದ ಸಮಿತಿಯಲ್ಲಿ ಅರ್ಜಿ ಆಯ್ಕೆ ಮಾಡಿದ ನಂತರ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.

ತೋಟಗಾರಿಕಾ ಇಲಾಖೆ ಉಪನಿರ್ದೇಶಕ ರಘು ಸಭೆಗೆ ಮಾಹಿತಿ ನೀಡಿ, ಕೇಂದ್ರ ಪುರಸ್ಕೃತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ 17564 ರೈತರು ನೋಂದಾಯಿಸಿದ್ದಾರೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಶೇ.80 ಗುರಿ ಸಾಧಿಸಲಾಗಿದೆ. ನರೇಗಾ ಯೋಜನೆಯಡಿ ತೋಟಗಾರಿಕೆ ಕಾರ್ಯಕ್ರಮಗಳಿಗಾಗಿ 346411 ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದರು.

ಜಿಲ್ಲೆಯು ತೆಂಗು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವುದರಿಂದ ಪರಿಶುದ್ಧ ತೆಂಗಿನಎಣ್ಣೆ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಹೋಬಳಿಗೊಂದು ಘಟಕ ಸ್ಥಾಪಿಸಬೇಕು ಎಂದು ಸಂಸದರು ನಿರ್ದೇಶನ ನೀಡಿದರು.

ಗುಬ್ಬಿ ತಾಲೂಕು ಹೇರೂರಿನಲ್ಲಿರುವ ರೇಷ್ಮೆ ಬಿತ್ತನೆ ಫಾರಂ ಹಾಳಾಗಿದ್ದು, ಜಿಲ್ಲೆಯು ರೇಷ್ಮೆ ಉತ್ಪಾದನೆಯಲ್ಲಿ ಬಹಳ ಹಿಂದುಳಿದಿದೆ. ರೇಷ್ಮೆ ಬೆಳೆ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹಣ ವಿನಿಯೋಗಿಸುತ್ತಿದ್ದರೂ ಸದುಪಯೋಗವಾಗುತ್ತಿಲ್ಲ ಎಂದು ರೇಷ್ಮೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರೈಲ್ವೆ, ಬೆಸ್ಕಾಂ, ಅರಣ್ಯ, ಲೋಕೋಪಯೋಗಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಎತ್ತಿನಹೊಳೆ ಯೋಜನೆ, ಭದ್ರ ಮೇಲ್ದಂಡೆ ಯೋಜನೆ, ರಾಷ್ಟ್ರೀಯ ಹೆದ್ದಾರಿ, ಹೇಮಾವತಿ ನಾಲೆ, ವಸತಿ, ನರೇಗಾ, ಶಿಕ್ಷಣ, ಮೀನುಗಾರಿಕೆ, ಮತ್ತಿತರ ಇಲಾಖೆಯಡಿ ಬರುವ ಕೇಂದ್ರ ಪುರಸ್ಕೃತ ಯೋಜನೆಗಳ ಪರಿಶೀಲನೆ ನಡೆಸಲಾಯಿತು.

ಶಾಸಕ ಕೆ.ಎ.ತಿಪ್ಪೇಸ್ವಾಮಿ, ಜಿಪಂ ಸಿಇಒ ಶುಭಾಕಲ್ಯಾಣ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಮತ್ತಿತರರು ಇದ್ದರು.

ಆಯಾ ತಾಲೂಕಿಗೆ ಮರು ಹಂಚಿಕೆ: ಸಾಮಾಜಿಕ ಭದ್ರತಾ ಯೋಜನೆ ಅನುಷ್ಠಾನದಲ್ಲಿ ರಾಷ್ಟ್ರೀಯ ಕುಟುಂಬ ನೆರವು ಯೋಜನೆಗಾಗಿ 79.40 ಲಕ್ಷ ರೂ. ಬಿಡುಗಡೆಯಾಗಿದ್ದು, ಆಯಾ ತಾಲೂಕಿಗೆ ಮರು ಹಂಚಿಕೆ ಮಾಡಲಾಗಿದೆ. ಉಳಿದಂತೆ ವೃದ್ಧಾಪ್ಯ ವೇತನ, ಅಂಗವಿಕಲ ಹಾಗೂ ವಿಧವಾ ವೇತನಗಳು ಫಲಾನುಭವಿಗಳ ಖಾತೆಗೆ ನೇರವಾಗಿ ಸಂದಾಯವಾಗುತ್ತಿದೆ. ಅಲ್ಲದೆ ಸಕಾಲ ಅರ್ಜಿಗಳನ್ನು 45 ದಿನಗಳೊಳಗಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಸಭೆಗೆ ಮಾಹಿತಿ ನೀಡಿದರು.

ಆಯುಷ್ಮಾನ್ ಭಾರತ್‌ನಡಿ ಕೋವಿಡ್-19 ಸೋಂಕಿಗಾಗಿ ಚಿಕಿತ್ಸೆ ಪಡೆದ 14 ಪ್ರಕರಣಗಳಲ್ಲಿ ಹೆಚ್ಚುವರಿ ಪಾವತಿ ಮಾಡಿದ ಹಣ ಮರುಪಾವತಿಸಲು 6 ಖಾಸಗಿ ಆಸ್ಪತ್ರೆಗಳಿಗೆ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ನಗರದ ಮಹಿಳಾ ಪದವಿ ಕಾಲೇಜು ಕಟ್ಟಡದ ದುರಸ್ತಿಗಾಗಿ ಅನುದಾನ ಬಿಡುಗಡೆಯಾಗಿದ್ದು, ನಿರ್ಮಾಣ ಕಾರ್ಯ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net