

ಶನಿವಾರಸಂತೆ : ಮಣ್ಣಿನ ಆರೋಗ್ಯ ಪರೀಕ್ಷೆ ಮಾಡಿಸುವುದು ಹಾಗೂ ಬೇಸಾಯದಲ್ಲಿ ಸಾವಯವ ಪದ್ಧತಿ ಅನುಸರಿಸುವುದರಿಂದ ಕಾಳುಮೆಣಸು ಬೆಳೆಯಲ್ಲಿ ಗುಣಮಟ್ಟ ಮತ್ತು ಹೆಚ್ಚಿನ ಇಳುವರಿ ಪಡೆಯಬಹುದು ಎಂದು ದೋಣಿಗಲ್ ಭಾರತೀಯ ಏಲಕ್ಕಿ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಮತ್ತು ವಿಜ್ಞಾನಿ ಡಾ.ಕೆ.ಎನ್.ಹರ್ಷ ತಿಳಿಸಿದರು.
ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸೋಮವಾರಪೇಟೆ ಸಾಂಬಾರ ಮಂಡಳಿಯ ಕ್ಷೇತ್ರಾಧಿಕಾರಿಗಳ ಕಚೇರಿ ಹಾಗೂ ಶನಿವಾರಸಂತೆ ರೋಟರಿ ಕ್ಲಬ್ ಸಹಯೋಗದಲ್ಲಿ ಏಲಕ್ಕಿ ಮತ್ತು ಕಾಳುಮೆಣಸು ಬೆಳೆಯ ಗುಣಮಟ್ಟ ಸುಧಾರಣೆಯ ಕುರಿತು ಬುಧವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಬೆಳೆಗಾರರು ಸಾವಯವ ಬೇಸಾಯದ ಕ್ರಮವನ್ನು ಅನುಸರಿಸಬೇಕು. ತೋಟವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು, ಕಾಳುಮೆಣಸು ಬೆಳೆಗೆ ಕಾಯಿಲೆ, ಸೋಂಕು ಬಂದಾಗ ಮಾತ್ರ ಸಾಂಬಾರ ಮಂಡಳಿಯವರು ಶಿಫಾರಸು ಮಾಡಿದ ಔಷಧ ಹಾಗೂ ಗೊಬ್ಬರ ನೀಡಬೇಕು. ಇದರಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.
ಕಾಳುಮೆಣಸು ಸಾಂಬಾರ ಬೆಳೆಗಳಲ್ಲಿ ಒಂದಾಗಿದ್ದು, ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವುದರ ಜತೆಗೆ ಮಣ್ಣಿನ 18 ಡಿಗ್ರಿಯಷ್ಟು ಉಷ್ಣಾಂಶ ಇರುವುದರಿಂದ ಬೆಳೆ ಗುಣಮಟ್ಟದಿಂದ ಕೂಡಿರುತ್ತದೆ. ಈ ನಿಟ್ಟಿನಲ್ಲಿ ಬೆಳೆಗಾರರು ಕಾಯಿಲೆ ಮತ್ತು ಸೋಂಕಿನ ಕಡೆಗೆ ಹೆಚ್ಚಿನ ನಿಗಾ ವಹಿಸುವಂತೆ ಸಲಹೆ ನೀಡಿದರು.
ಸಕಲೇಶಪುರ ಸಾಂಬಾರ ಮಂಡಳಿಯ ಉಪನಿರ್ದೇಶಕ ಎಂ.ವೈ.ಹೊನ್ನೂರು ಸಾಂಬಾರ ಬೆಳೆಯ ಮಾರಾಟ ಮತ್ತು ಮಾರುಕಟ್ಟೆ ವ್ಯವಸ್ಥೆ ಕುರಿತು ಮಾತನಾಡಿ, ನಮ್ಮ ದೇಶದಲ್ಲಿ 52 ಬಗೆಯ ಸಾಂಬಾರ ಬೆಳೆಗಳಿದ್ದು, ಇವು ವಿದೇಶಗಳಿಗೆ ರಫ್ತಾಗುತ್ತದೆ. ಈ ನಿಟ್ಟಿನಲ್ಲಿ ಯುವಕರು ಸಾಂಬಾರ ಉತ್ಪನ್ನಗಳ ಉದ್ದಿಮೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ತಾವೇ ಉದ್ದಿಮೆಗಳನ್ನು ಸ್ಥಾಪಿಸಿ ಎಂದು ಸಲಹೆ ನೀಡಿದರು.
ಏಲಕ್ಕಿ ಬೆಳೆಯ ತಳಿಗಳು, ನಿರ್ವಹಣೆ , ಏಲಕ್ಕಿಯನ್ನು ಒಣಗಿಸುವ ಕ್ರಮ ವಿಷಯದ ಕುರಿತು ಸಕಲೇಶಪುರ ಸಾಂಬಾರ ಮಂಡಳಿಯ ಸಂಪನ್ಮೂಲ ವ್ಯಕ್ತಿ ವಿಜಯ ಮಾಹಿತಿ ನೀಡಿದರು.
ಕಾಳುಮೆಣಸು ಬೆಳೆಗಾರ ಮತ್ತು ರಾಷ್ಟ್ರಮಟ್ಡದಲ್ಲಿ ಕಾಳುಮೆಣಸು ಬೆಳೆಯಲ್ಲಿ ಹೆಚ್ಚಿನ ಇಳುವರಿ ಗಳಿಸಿ ಪ್ರಶಸ್ತಿ ಪಡೆದ ಕೆ.ಎಂ.ಕಾಂತರಾಜ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕಾಳುಮೆಣಸು ಬೆಳೆಯುವ ಕ್ರಮದ ಕುರಿತು ಮಾಹಿತಿ ನೀಡಿದರು.
ಸೋಮವಾರಪೇಟೆ ಸಾಂಬಾರ ಮಂಡಳಿಯ ಕ್ಷೇತ್ರಾಧಿಕಾರಿ ಎನ್.ಬಿ.ಲೋಕೇಶ್, ರೋಟರಿ ಕ್ಲಬ್ ಅಧ್ಯಕ್ಷ ವಿ.ಎಲ್.ವರ್ಷಿತ್, ಕಾಫಿ ಮತ್ತು ಕಾಳುಮೆಣಸು ಬೆಳೆಗಾರ ಎಚ್.ವಿ.ದಿವಾಕರ್, ರೋಟರಿ ಕ್ಲಬ್ ಕಾರ್ಯದರ್ಶಿ ಶ್ವೇತಾವಸಂತ್, ರೋಟರಿ ಕ್ಲಬ್ ಸದಸ್ಯರು ಹಾಜರಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಸ್ವಚ್ಛತೆ ಹೈ ಸೇವಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.