ಮಣ್ಣನ್ನು ಭೂಮಿತಾಯಿಯಂತೆ ಗೌರವಿಸಬೇಕು: ಮಣಿ ಉತ್ತಪ್ಪ

MDK04
Published on

ಮಡಿಕೇರಿ: ಮಣ್ಣಿನ ರಕ್ಷಣೆ ನಮ್ಮೆರ ಹೊಣೆಯಾಗಿದ್ದು ಮಣ್ಣನ್ನು ಭೂಮಿತಾಯಿ ಎಂದು ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಕಿವಿಮಾತು ಹೇಳಿದರು.


ಚೆಟ್ಟಳ್ಳಿಯ ಶ್ರೀನರೇಂದ್ರ ಮೋದಿ ರೈತ ಸಹಕಾರ ಭವನದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚೆಟ್ಟಳ್ಳಿ ಹಾಗೂ ಕೆಮಿಕಲ್ಸ್ ಮತ್ತು ಫರ್ಟಿಲೈರ್ಸ್‌ ಲಿಮಿಟೆಡ್ ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಮಣ್ಣು ದಿನಚರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ರೈತರಿಗೆ ಅನುಕೂಲವಾಗುವಂತೆ ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಮಣ್ಣು ಪರೀಕ್ಷಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಮಣ್ಣಿನ ರಕ್ಷಣೆ ನಮ್ಮೆರ ಹೊಣೆಯಾಗಿದೆ. ಮಣ್ಣನ್ನು ಭೂಮಿತಾಯಿ ಎಂದು ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡಬೇಕೇಂದು ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದರು.


ಚೆಟ್ಟಳ್ಳಿ ಕೇಂದ್ರಿಯ ತೋಟಗಾರಿಕಾ ಪ್ರಯೋಗ ಕೇಂದ್ರ ಮೇಲ್ವಿಚಾರಕ ಡಾ.ಎಸ್.ರಾಜೇಂದ್ರನ್ ಮಾತನಾಡಿ, ಪ್ರತೀ ಮೂರು ವರ್ಷಗಳಿಗೊಮ್ಮೆ ಮಣ್ಣಿನ ಪರೀಕ್ಷೆ ಮಾಡಬೇಕು. ವಿವಿಧ ಬೆಳೆಗಳಿಗೆ ಸೂಕ್ತ ಪೌಷ್ಟಿಕಾಂಶ ನೀಡಿದ್ದಲ್ಲಿ ಅಧಿಕ ಇಳುವರಿ ಪಡೆಯಬಹುದು ಎಂದರು.


ಕೇಂದ್ರಿಯ ತೋಟಗಾರಿಕಾ ಪ್ರಯೋಗ ಕೇಂದ್ರ ಚೆಟ್ಟಳ್ಳಿಯ ವಿಜ್ಞಾನಿ ಡಾ.ಜಿ.ಎಸ್.ಮಧು ಮಾತನಾಡಿ, ಸೂಕ್ತ ರಕ್ಷಣೆ ಹಾಗು ವಿವಿಧ ಪೋಷಕಾಂಶ ಯುಕ್ತ ಗೊಬ್ಬರಗಳನ್ನು ಸಕಾಲದಲ್ಲಿ ಕರಿಮೆಣಸು ಬಳ್ಳಿಗೆ ಬಳಸುವ ಮೂಲಕ ಅಧಿಕ ಇಳಿವರಿ ಪಡೆಯಬಹುದು. ಜತೆಗೆ ಬಳ್ಳಿಗಳ ರಕ್ಷಣೆ ಮಾಡಬಹುದು ಎಂದರು.


ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈರ್ಸ್‌ ಲಿಮಿಟೆಡ್‌ನ ಮಾರ್ಕೆಟಿಂಗ್ ಡೆಪ್ಯೂಟಿ ಮ್ಯಾನೇಜರ್ ಬಿ.ಎಸ್.ಧೃತಿರಾಜ್ ವಿವಿಧ ಗೊಬ್ಬರಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ, ಚೆಟ್ಟಳ್ಳಿ ಕೇಂದ್ರಿಯ ತೋಟಗಾರಿಕಾ ಪ್ರಯೋಗ ಕೇಂದ್ರ ಮೇಲ್ವಿಚಾರಕ ಡಾ.ಎಸ್.ರಾಜೇಂದ್ರನ್, ತಜ್ಞರಾದ ಡಾ.ಜಿ.ಎಸ್.ಮಧುರವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ನಂದಿನಿ, ಸಂಘದ ನಿರ್ದೇಶಕರು, ರೈತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net