ಮಣ್ಣಿನ ಗುಣಮಟ್ಟಕ್ಕಾಗಿ ಬಿಜೋಪಚಾರ ಅಗತ್ಯ

jivansab
jivansab
Published on

ಅಳವಂಡಿ: ತೇವಾಂಶ ಇದ್ದರೆ ಬಿತ್ತನೆ ಕೈಗೊಳ್ಳಿ. ಬಿತ್ತನೆಗೆ ಮುನ್ನ ಮಣ್ಣಿನಿಂದ ಹರಡುವ ಕೀಟ ಮತ್ತು ರೋಗಬಾಧೆ ತಡೆಗಟ್ಟಲು ಬಿಜೋಪಚಾರ ಮಾಡಿ ಎಂದು ಸಹಾಯಕ ಕೃಷಿ ನಿರ್ದೇಶಕ ಜೀವನಸಾಬ್ ಕುಷ್ಟಗಿ ತಿಳಿಸಿದರು.

ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಇತ್ತೀಚೆಗೆ ಮುಂಗಾರು ಹಂಗಾಮಿನ ಬೀಜ ವಿತರಣೆ ಹಾಗೂ ಬೀಜ ಸಂಗ್ರಹ ಕುರಿತು ಪರಿಶೀಲಿಸಿ ಮಾತನಾಡಿದರು. ಸಂಪರ್ಕ ಕೇಂದ್ರಗಳಾದ ಕೊಪ್ಪಳ, ಇರಕಲ್ಲಗಡ, ಅಳವಂಡಿ, ಹುಲಗಿ, ಹಾಗೂ 2 ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳಾದ ಹಿರೇಸಿಂದೋಗಿ, ಇಂದರಗಿ ಮೂಲಕ ಮುಂಗಾರು ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ.

ಬಿತ್ತನೆ ಬೀಜಗಳನ್ನು ಮಾರ್ಗಸೂಚಿ ಅನ್ವಯ ಎಲ್ಲ ವರ್ಗದ ರೈತರಿಗೆ ಗರಿಷ್ಠ 2 ಹೆಕ್ಟೇರ್ ಅಥವಾ ಅವರ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ವಿತರಿಸಲಾಗುವುದು. ಕೊಪ್ಪಳ ತಾಲೂಕಿಗೆ 2025-26ನೇ ಸಾಲಿನಲ್ಲಿ ಭತ್ತ-910, ಮೆಕ್ಕೆಜೋಳ-2335, ಸಜ್ಜೆ-58, ತೊಗರಿ-112, ಹೆಸರು-42, ಅಲಸಂದಿ-5, ಸೂರ್ಯಕಾಂತಿ-35 ಹಾಗೂ ನವಣೆ-2 ಕ್ವಿಂ.ಗಳ ಬೇಡಿಕೆ ಇದ್ದು, ಪ್ರಸ್ತುತ ರೈತ ಸಂಪರ್ಕ ಕೇಂದ್ರಗಳಲ್ಲಿ ಮೆಕ್ಕೆಜೋಳ-174.80, ಸಜ್ಜೆ-13.50, ತೊಗರಿ-42 ಹಾಗೂ ಹೆಸರು-16.20 ಒಟ್ಟು 252.50 ಕ್ವಿಂ. ಬೀಜ ದಾಸ್ತಾನು ಲಭ್ಯವಿದೆ ಎಂದರು.

ಎಲ್ಲ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ರಸಗೊಬ್ಬರವನ್ನು ಪಿ.ಒ.ಎಸ್ ಮಿಷನ್ ಮೂಲಕ ರೈತರ ಮಾಹಿತಿಯನ್ನು ನಮೂದಿಸಿ ಮಾರಾಟ ಮಾಡುವುದು ಹಾಗೂ ಅಧಿಕೃತ ಬಿತ್ತನೆ ಬೀಜ ಮಾರಾಟಗಾರರಿಂದಲೇ ಬೀಜ ಖರೀದಿಸಿ. ರಸೀದಿಯಲ್ಲಿ ಲಾಟ್ ನಂಬರ್, ಉತ್ಪಾದಕರು ಹಾಗೂ ಮಾರಾಟಗಾರರ ವಿಳಾಸ ಗಮನಿಸಬೇಕು. ಬಿತ್ತನೆ ಬೀಜ ಪ್ರಾಧಿಕಾರದಿಂದ ಪರೀಕ್ಷಿಸಲ್ಪಟ್ಟು ಗುಣಮಟ್ಟದ ಬಗ್ಗೆ ಧೃಡೀಕರಿಸಿರುವುದನ್ನು ಗಮನಿಸಿ ಖರೀದಿಸಿ ಎಂದು ಜೀವನಸಾಬ್ ಕುಷ್ಟಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net