

ತಿಪಟೂರು: ಭೂಮಿಯ ಆರೋಗ್ಯ ರಕ್ಷಣೆ ಜೈವಿಕ ಕೃಷಿಯಿಂದ ಮಾತ್ರ ಸಾಧ್ಯ ಎಂದು ಕೊನೇಹಳ್ಳಿಯ ಪಶು ಸಂಗೋಪನೆ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಡಾ.ಮಧುಸೂದನ್ ಹೇಳಿದರು.
ತಾಲೂಕಿನ ಕೊನೇಹಳ್ಳಿಯ ಐಸಿಎಆರ್, ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಭಾನುವಾರ ನಿವೃತ್ತ ಸೈನಿಕರಿಗೆ ಸಾವಯವ ಕೃಷಿ ಹಾಗೂ ಪರಿಕರಗಳ ತಯಾರಿಕೆ ಕುರಿತು ಹಮ್ಮಿಕೊಂಡಿದ್ದ ಎರಡು ದಿನಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭೂಮಿಯ ಆರೋಗ್ಯ ಹಾಳಾಗುತ್ತಿರುವ ಸಂದರ್ಭದಲ್ಲಿ ಜೈವಿಕ ಕೃಷಿ ಮಾತ್ರ ಶಾಶ್ವತ ಪರಿಹಾರ ಒದಗಿಸಬಲ್ಲದು. ಮಣ್ಣಿನ ಜೀವಾಣು ಸಮತೋಲನವನ್ನು ಕಾಪಾಡುವುದು, ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು ಮತ್ತು ಗ್ರಾಹಕರಿಗೆ ಸುರಕ್ಷಿತ ಆಹಾರ ಒದಗಿಸುವುದು ಇದರ ಪ್ರಮುಖ ಗುರಿ ಎಂದರು.
ನಿವೃತ್ತ ಸೈನಿಕ ಶಿವಕುಮಾರ್ ಮಾತನಾಡಿ, ಸೈನಿಕ ಜೀವನದಲ್ಲಿ ನಾವು ಪಡೆದ ಶಿಸ್ತು, ಪರಿಶ್ರಮ, ಧೈರ್ಯ, ಇವೆಲ್ಲವನ್ನು ಕೃಷಿಯಲ್ಲಿ ಬಳಸಿದರೆ ನಾವೂ ಕೂಡಾ ಮಾದರಿ ರೈತರಾಗಬಹುದು. ಕೃಷಿ ವಿಜ್ಞಾನ ಕೇಂದ್ರ ನೀಡುತ್ತಿರುವ ತರಬೇತಿ ನಮಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ ಎಂದರು.
ತರಬೇತಿ ಸಂಯೋಜಕ ಡಾ.ದರ್ಶನ್ ಮಾತನಾಡಿ, ಸಾವಯವ ಕೃಷಿ ಅಂದರೆ ಕೇವಲ ಗೊಬ್ಬರ ಅಥವಾ ಕೀಟನಾಶಕ ಬದಲಾವಣೆ ಅಲ್ಲ. ಇದು ಒಂದು ಜೀವನಶೈಲಿ. ಮಣ್ಣನ್ನು ಜೀವಂತವಾಗಿಡುವುದು ಮತ್ತು ನೀರಿನ ಮೂಲಗಳನ್ನು ಶುದ್ಧವಾಗಿಡುವುದು ಮತ್ತು ಗ್ರಾಹಕರಿಗೆ ವಿಷರಹಿತ ಆಹಾರ ನೀಡುವುದು ಇದರ ಮೂಲ ಉದ್ದೇಶ ಎಂದರು.
ಕೇಂದ್ರದ ಪಶು ವಿಜ್ಞಾನಿ ಡಾ.ಶಿವಪ್ಪನಾಯಕ ಮಾತನಾಡಿ, ಈ ತರಬೇತಿಯಲ್ಲಿ ಬೀಜಾಮೃತ, ಜೀವಾಮೃತ, ಪಂಚಗವ್ಯ ಘನ ಜೀವಾಮೃತಗಳ ತಯಾರಿ ಮತ್ತು ಅವುಗಳ ಬಳಕೆಯ ವಿಧಾನಗಳನ್ನು ನೇರವಾಗಿ ಕಲಿಸಲಾಗುತ್ತಿದೆ. ರೈತರು ಸ್ವತ@ ಜೈವಿಕ ಪರಿಕರಗಳನ್ನು ತಯಾರಿಸಿ ಬಳಸಿ, ಕೃಷಿಯಲ್ಲಿನ ಖರ್ಚು ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಕೇಂದ್ರದ ವಿಜ್ಞಾನಿಗಳಾದ ಡಾ.ಕೀರ್ತಿಶಂಕರ್, ಡಾ.ಗಾನವಿ, ಡಾ.ಪದ್ಮನಾಭನ್, ಸೇರಿದಂತೆ 30 ಶಿಬಿರಾರ್ಥಿಗಳು ಇದ್ದರು.