

ಬೆಂಗಳೂರು: ನಗರದ ಬೆಳ್ಳಂದೂರು ಮತ್ತು ವರ್ತರು ಕೆರೆಗಳಲ್ಲಿ ರಾಸಾಯನಿಕ ನೊರೆ, ಬೆಂಕಿ ಕಾಣಿಸಿಕೊಂಡು ದೇಶಾದ್ಯಂತ ಸುದ್ದಿಯಾಗಿದ್ದವು. ಕೆರೆಗಳ ಅಭಿವೃದ್ಧಿಗಾಗಿ ಬಿಡಿಎ ಒಟ್ಟು 85 ಲಕ್ಷ ಘನ ಮೀಟರ್ ಹೂಳೆತ್ತಲು ಮುಂದಾಗಿದೆ. ಕೃಷಿಕರಿಗೆ ಅಥವಾ ಇಟ್ಟಿಗೆ ನಿರ್ಮಾಣ ಮಾಡುವವರಿಗೆ ಹೂಳನ್ನು ಉಚಿತವಾಗಿ ಕೊಡಲು ಚಿಂತನೆ ನಡೆಸಿದೆ.
ರಾಸಾಯನಿಕ ನೀರು ಸೇರ್ಪಡೆ: ಬೆಂಗಳೂರು ಪೂರ್ವ ವಲಯದಲ್ಲಿ ವಸತಿ ಸಮುಚ್ಚಯಗಳು ಹಾಗೂ ಕಾರ್ಖಾನೆಗಳ ಬಹುದೊಡ್ಡ ಸಂಖ್ಯೆಯಲ್ಲಿ ತಲೆಎತ್ತಿವೆ. ಬಡಾವಣೆಗಳ ಸ್ಯಾನಿಟರಿ ನೀರು ಮತ್ತು ಕಾರ್ಖಾನೆಗಳ ರಾಸಾಯನಿಕ ನೀರು ನೇರವಾಗಿ ಪಕ್ಕದಲ್ಲಿದ್ದ ಬೆಳ್ಳಂದೂರು ಮತ್ತು ವರ್ತರು ಕೆರೆ ಮಡಿಲು ಸೇರುತ್ತಿದೆ. ಇದರಿಂದ ರಾಸಾಯನಿಕ ನೊರೆ ಮತ್ತು ಬೆಂಕಿ ಹೊತ್ತಿಕೊಳ್ಳುವ ಘಟನೆಗಳು ಸಾಮಾನ್ಯವಾಗಿವೆ. ಇದರಿಂದ ಅವಳಿ ಕೆರೆಗಳು ಜಲಮಾಲಿನ್ಯಕ್ಕೆ ಕುಖ್ಯಾತಿ ಪಡೆದಿವೆ.
ಹೂಳೆತ್ತಲು 369 ಕೋಟಿ ರೂ. ವೆಚ್ಚ: ಬೆಳ್ಳಂದೂರು ಕೆರೆಯ 916.14 ಎಕೆರೆ ವಿಸ್ತೀರ್ಣದಲ್ಲಿ 50 ಲಕ್ಷ ಘನ ಮೀಟರ್ ಹೂಳು ತುಂಬಿಕೊಂಡಿದೆ. ಈ ಹೂಳೆತ್ತುವ ಕಾಮಗಾರಿಗೆ 250 ಕೋಟಿ ರೂ. ಅಂದಾಜು ವೆಚ್ಚ ನಿಗದಿಯಾಗಿದೆ. 434.39 ಎಕರೆ ವಿಸ್ತೀರ್ಣದ ವರ್ತರು ಕೆರೆಯಲ್ಲಿ 35 ಲಕ್ಷ ಘನ ಮೀಟರ್ ಹೂಳು ತುಂಬಿಕೊಂಡಿದ್ದು, ಇದನ್ನು ತೆರವು ಮಾಡಲು 119 ಕೋಟಿ ರೂ. ವೆಚ್ಚವಾಗಲಿದೆ. ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಫೆ.15ರೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಕೆರೆಗಳಿಗೆ ಹೊಸ ರೂಪ: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್ಜಿಟಿ) ಕೆರೆಗಳ ಮಾಲಿನ್ಯಕ್ಕೆ ಕಾರಣವಾದ ಎಲ್ಲ ಕಾರ್ಖಾನೆಗಳು ಹಾಗೂ ಕಾಲುವೆಗಳಿಂದ ಬಂದು ಸೇರುತ್ತಿದ್ದ ತ್ಯಾಜ್ಯ ನೀರನ್ನು ತಡೆಯಲು ಕಟ್ಟುನಿಟ್ಟಿನ ಆದೇಶ ನೀಡಿತ್ತು. ಇದರನ್ವಯ ಬಿಡಿಎ ಕೆರೆಯ ಅಭಿವೃದ್ಧಿ ಕಾರ್ಯವನ್ನು 2020ರ ಆರಂಭದಲ್ಲಿಯೇ ಕೈಗೆತ್ತಿಕೊಂಡಿದೆ.
ಬೆಳ್ಳಂದೂರು ಕೆರೆ ಸ್ವಚ್ಛತೆಗೆ ಒಂದೂವರೆ ವರ್ಷ ಹಾಗೂ ವರ್ತರು ಕೆರೆ ಸ್ವಚ್ಛತೆಗೆ 1 ವರ್ಷ ಸಮಯಾವಕಾಶ ಬೇಕೆಂದು ಸರ್ಕಾರಕ್ಕೆ ವರದಿ ನೀಡಿದೆ.
ಬೋಟಿಂಗ್ ಇತರ ಜಲಕ್ರೀಡೆಗಳು: ಇದಾದ ಬಳಿಕ ಇನ್ನು 6 ತಿಂಗಳಲ್ಲಿ ಕೆರೆಗಳ ಇತರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತದೆ. ಹಾಗಾಗಿ ಉಭಯ ಕೆರೆಗಳು ಇನ್ನೆರಡು ವರ್ಷಗಳಲ್ಲಿ ಹೊಸ ರೂಪು ಪಡೆದುಕೊಳ್ಳಲಿರುವುದಾಗಿ ಹೇಳಲಾಗುತ್ತಿದೆ. ಬಳಿಕ ಕೆರೆ ದಂಡೆಯ ಸುತ್ತಲೂ ಗಿಡಮರಗಳನ್ನು ಬೆಳೆಸಿ, ಬೋಟಿಂಗ್ ಸೇರಿ ಇತರ ಜಲಕ್ರೀಡೆಗಳನ್ನು ವ್ಯವಸ್ಥೆಗೊಳಿಸಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ.
ಎನ್ಜಿಟಿಯಿಂದ ಮಣ್ಣು ಪರೀಕ್ಷೆ
ಬಿಡಿಎ ಈಗಾಗಲೇ ಕೆರೆಯಲ್ಲಿರುವ ಹೂಳಿನ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಹೆಬ್ಬಾಳ ಮಣ್ಣು ಪರೀಕ್ಷಾ ಘಟಕಕ್ಕೆ ರವಾನಿಸಿದೆ. ಆದರೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್ಜಿಟಿ) ಮತ್ತು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳು ಕೂಡ ಪ್ರತ್ಯೇಕವಾಗಿ ಮಣ್ಣು ಪರೀಕ್ಷೆ ಮಾಡಲು ಮುಂದಾಗಿವೆ. ಉಭಯ ಸಂಸ್ಥೆಗಳು ಕಳೆದ ಶನಿವಾರ (ಜ.18) ಎರಡು ಕೆರೆಗಳ ಮಣ್ಣು ಹಾಗೂ ನೀರನ್ನು ಪರೀಕ್ಷೆಗೆ ಕೊಂಡೊಯ್ದಿವೆ.
ವರ್ತರು ಬಳಿ ಕ್ವಾರಿಗೆ ಹೂಳು
ಕೆರೆಯ ಹೂಳು ಕೃಷಿ ಭೂಮಿಗೆ ಮತ್ತು ಇಟ್ಟಿಗೆ ನಿರ್ಮಾಣ ಮಾಡಲು ಯೋಗ್ಯವಾಗಿಲ್ಲ ಎಂದಾದರೆ ಅದನ್ನು ವರ್ತರು ಬಳಿ ಅಂದಾಜು 25 ಕಿ.ಮೀ ವ್ಯಾಪ್ತಿಯೊಳಗಿನ ಕ್ವಾರಿಯಲ್ಲಿ ವಿಲೇವಾರಿ ಮಾಡಲು ಬಿಡಿಎ ನಿರ್ಧರಿಸಿದೆ. ಹೂಳು ಕೃಷಿಗೆ ಯೋಗ್ಯವಾಗಿದ್ದರೂ, ರೈತರು ತುಂಬಿಕೊಂಡು ಹೋಗದಿದ್ದರೆ ಹತ್ತಿರದ ಕ್ವಾರಿಗಳಲ್ಲಿ ಅದನ್ನು ವಿಲೇವಾರಿ ಮಾಡಲಾಗುವುದು ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆರೆಗಳ ಹೂಳನ್ನು ಹೆಬ್ಬಾಳ ಮಣ್ಣು ಪರೀಕ್ಷಾ ಕೇಂದ್ರಕ್ಕೆ ಕಳಿಸಲಾಗಿದೆ. ಜ.27ಕ್ಕೆ ಮಣ್ಣು ಪರೀಕ್ಷಾ ವರದಿ ಬರಲಿದೆ. ಆಗ ಮಣ್ಣು ಕೃಷಿಗೆ ಯೋಗ್ಯವಾಗಿದೆಯೇ ಎಂಬುದು ಸ್ಪಷ್ಟವಾಗಲಿದೆ. | ಶಿವಾನಂದ ಬಿಡಿಎ ಇಂಜಿನಿಯರ್