ಮನುಕುಲದ ಅಳಿವು, ಉಳಿವಿಗೆ ಮಣ್ಣು ಕಾರಣ

GKN JALANAYANA YATRE
Published on

ಗೋಕರ್ಣ: ಮಣ್ಣು ಇರುವ ತನಕ ಈ ವಿಶ್ವ ಇರಬಲ್ಲದು. ಆಹಾರ ಬೆಳೆಯಲು ಅತ್ಯಂತ ಅವಶ್ಯವಾದ ಮಣ್ಣಿಲ್ಲದೆ ಏನನ್ನೂ ಬೆಳೆಯಲು ಸಾಧ್ಯವಿಲ್ಲ. ಕಾರಣ ಸಮಸ್ತ ಮನುಕುಲದ ಉಳಿವು ಮತ್ತು ಅಳಿವು ಮಣ್ಣಿನ ಸಂರಕ್ಷಣೆಯ ಮೇಲಿದೆ ಎಂದು ಕೃಷಿ ಇಲಾಖೆ ಉಪನಿರ್ದೇಶಕ ಟಿ.ಎಚ್. ನಟರಾಜ ಹೇಳಿದರು.

ತಾಲೂಕು ಕೃಷಿ ಇಲಾಖೆ ವತಿಯಿಂದ ಸ್ಥಳೀಯ ಮಾದರಿ ಶಾಲೆ ಬಯಲು ರಂಗ ಮಂಟಪದಲ್ಲಿ ಆಯೋಜಿಸಿದ್ದ ಜಲಾನಯನ ಯಾತ್ರೆ ವಿಶೇಷ ಸಮಾರಂಭದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಕೃಷಿ ಕುರಿತ ಕಾಳಜಿಯ ಅಭಾವದಿಂದ ಮಣ್ಣಿನ ಸವಕಳಿಯ ಆತಂಕ ಎದುರಾಗಿದೆ. ಮಣ್ಣನ್ನು ಸಂರಕ್ಷಿಸಿಕೊಳ್ಳಲು ಇದನ್ನು ತಡೆಯುವ ಅಗತ್ಯವಿದ್ದು, ಕಾರಣ ಪ್ರತಿಯೊಬ್ಬ ರೈತರು ತಮ್ಮ ಭೂಮಿಗಳಲ್ಲಿ ಬದು ನಿರ್ವಿುಸುವುದು ಮತ್ತು ಇನ್ನಿತರ ತ್ವರಿತ ರಕ್ಷಣಾಕಾರ್ಯಕ್ಕೆ ಮುಂದಾಗಬೇಕು ಎಂದರು.

ನಿವೃತ್ತ ಕೃಷಿ ಅಧಿಕಾರಿ ಶಂಕರ ಹೆಗಡೆ ಮಾತನಾಡಿ, ಮಣ್ಣಿಂದ ಕಾಯ. ಮಣ್ಣಿಂದ ಸಕಲ ವಸ್ತೆಗಳೆಲ್ಲ. ಕಾರಣ ಮಣ್ಣು ಬಿಟ್ಟವರಿಗೆ ಆಧಾರವಿಲ್ಲ. ಮುಂದಿನ ಪೀಳಿಗೆಗೆ ಮಣ್ಣನ್ನು ಉಳಿಸಿ ಹಸ್ತಾಂತರಿಸುವ ಮಹತ್ಕಾರ್ಯ ಎಲ್ಲ ರೈತರಿಂದ ಆಗಬೇಕು ಎಂದರು.

ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ಮಾತನಾಡಿ, ಪ್ರತಿಯೊಬ್ಬರೂ ಭೂಮಿ ಮತ್ತು ಜಲ ಸಂರಕ್ಷಣೆಯ ಪ್ರತಿಜ್ಞೆಗೆ ಬದ್ಧರಾಗಬೇಕು ಎಂದು ಮನವಿ ಮಾಡಿದರು.

ಸಮಾರಂಭವನ್ನು ಬಾವಿಕೊಡ್ಲದ ಪ್ರಗತಿಪರ ರೈತ ಮಹಾದೇವ ಗೌಡ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಲ ಸಂರಕ್ಷಣೆ ಕುರಿತು ಬೀದಿ ನಾಟಕ, ಬಾವಿಕೊಡ್ಲದ ರೈತರಿಂದ ಜಾನಪದ ಗುಮಟೆಪಾಂಗ ನಡೆಯಿತು. ಪ್ರಗತಿಪರ ರೈತರನ್ನು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸ್ಥಳೀಯ ಪಂಚಾಯಿತಿ ಅಧ್ಯಕ್ಷೆ ಸುಮನಾ ಗೌಡ ಅಧ್ಯಕ್ಷತೆ ವಹಿಸಿದ್ದರು. ಹನೇಹಳ್ಳಿ ಗ್ರಾಪಂ ಅಧ್ಯಕ್ಷ ಸಣ್ಣು ಗೌಡ, ಮುಖ್ಯಾಧ್ಯಾಪಕ ಸಿ.ಜಿ. ನಾಯಕದೊರೆ ಇತರರು ವೇದಿಕೆಯಲ್ಲಿದ್ದರು. ಇಲಾಖೆಯ ಸಿ.ಎಸ್. ಬರ್ಗಿ, ಧನಂಜಯ ನಾಯ್ಕ, ಮಂಜುನಾಥ ರೇವಣಕರ,ನಂದಿತಾ ಪಟಗಾರ, ಇತರರು ನಿರ್ವಹಿಸಿದರು. ಕಾರ್ಯಕ್ರಮಕ್ಕೂ ಮೊದಲು ಜಲ ಮತ್ತು ಮಣ್ಣು ರಕ್ಷಣೆ ಕುರಿತಾದ ವಿಶೇಷ ಜಾಥಾ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net