ರಾಸಾಯನಿಕ ಗೊಬ್ಬರದಿಂದ ಮಣ್ಣು ವಿಷಮಿಶ್ರಿತ

oplus_0
ಕೋಣಸಾಲೆ ಗ್ರಾಮದ ಪ್ರಗತಿಪರ ರೈತ ರಾಧಾಕೃಷ್ಣ ಅವರ ತೋಟದಲ್ಲಿ ಆಯೋಜಿಸಿದ್ದ ಮಾಸಿಕ ಸಭೆಯಲ್ಲಿ ಕೃಷಿ ತಜ್ಞ ಪ್ರಶಾಂತ್ ಜೋಷಿ ಮಾತನಾಡಿದರು. ಎಂ.ಎನ್.ಮಹೇಶ್‌ಕುಮಾರ್, ಪ್ರಶಾಂತ್ ಜೋಷಿ, ಡಾ.ನಾಗಭೂಷಣ್, ರಾಧಾಕೃಷ್ಣ, ಚಿಕ್ಕಣ್ಣ ಇದ್ದರು.
Published on

ಮದ್ದೂರು: ರೈತರು ಸಾವಯವ ಕೃಷಿಯತ್ತ ಮುಖ ಮಾಡುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದಾಗಿದ್ದು, ಆ ಮೂಲಕ ಸ್ವ-ಉದ್ಯೋಗ ಕಂಡುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್‌ಕುಮಾರ್ ಸಲಹೆ ನೀಡಿದರು.

ತಾಲೂಕಿನ ಕೋಣಸಾಲೆ ಗ್ರಾಮದ ಪ್ರಗತಿಪರ ರೈತ ರಾಧಾಕೃಷ್ಣ ಅವರ ತೋಟದಲ್ಲಿ ಶನಿವಾರ ಆಯೋಜಿಸಿದ್ದ ಸಂಪೂರ್ಣ ಸಾವಯವ ಕೃಷಿಕರ ಸಂಘದ ಸರ್ವ ಸದಸ್ಯರ ಮಾಸಿಕ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ರೈತರು ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಿರುವುದರಿಂದ ಮಣ್ಣು ವಿಷಮಿಶ್ರಿತವಾಗಿ ಪರಿವರ್ತನೆಯಾಗುತ್ತಿದೆ. ಇದರಿಂದಾಗಿ ಮಾನವನ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ಮಣ್ಣು, ಪರಿಸರವನ್ನು ಬದಲಾವಣೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ರೈತರೇ ಬದಲಾವಣೆಯತ್ತ ಮುಖ ಮಾಡಬೇಕಾದ ಅನಿವಾರ್ಯತೆಯಿದ್ದು, ಪ್ರಸ್ತುತ ದಿನಗಳಲ್ಲಿ ಜಮೀನುಗಳಿಗೆ ಹೆಚ್ಚು ನೀರು ಬಳಕೆ ಮಾಡಿಕೊಳ್ಳುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

ಸಾವಯವ ಕೃಷಿ ತಜ್ಞ ಡಾ.ನಾಗಭೂಷಣ್ ಮಾತನಾಡಿ, ರಾಸಾಯನಿಕ ಬಳಕೆಯಿಂದ ಇಳುವರಿ ಕಡಿಮೆಯಾಗುತ್ತಿದೆ. ರೈತರು ಆಧುನಿಕ ಕೃಷಿ ಬೇಸಾಯದತ್ತ ಮುಖ ಮಾಡುತ್ತಿರುವ ಪರಿಣಾಮ ಸಾವಯವ ಕೃಷಿ ಪದ್ಧತಿ ಇಳಿಮುಖವಾಗುತ್ತಿದೆ ಎಂದು ಹೇಳಿದರು.

ರಾಸಾಯನಿಕ ಬಳಕೆಯಿಂದಾಗುವ ಅನನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರಲ್ಲದೆ, ಸಂಘದ ಸದಸ್ಯರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಅಧಿಕ ಇಳುವರಿ ಪಡೆದು ಆರ್ಥಿಕ ಸ್ವಾವಲಂಬಿ ಬದುಕನ್ನು ಕಂಡುಕೊಳ್ಳುವಂತೆ ಸಲಹೆ ನೀಡಿದರು.

ಉತ್ತಮ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮಗಳ ಜವಾಬ್ದಾರಿ. ತೋಟಗಾರಿಕೆ ಬೆಳೆಗಳನ್ನು ಬೆಳೆದು ಅಧಿಕ ಲಾಭ ಗಳಿಸಿ ಇತರ ರೈತರನ್ನೂ ಸಾವಯವ ಕೃಷಿ ಪದ್ಧತಿಯತ್ತ ಕರೆತರುವ ಯತ್ನಕ್ಕೆ ಮುಂದಾಗಬೇಕು ಎಂದರು.

ಕೃಷಿ ತಜ್ಞರಾದ ಪ್ರಶಾಂತ್ ಜೋಷಿ, ಕಾಡು ಕೃಷಿ ತಜ್ಞ ಮಾಳಲಿ ಗೌಡ್ರು, ಪ್ರಗತಿ ಪರ ರೈತ ಕೋಣಸಾಲೆ ರಾಧಾಕೃಷ್ಣ, ಸಂಘದ ಪದಾಧಿಕಾರಿಗಳಾದ ಚಿಕ್ಕಣ್ಣ, ಗಜೇಂದ್ರ, ಶಿವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net