

ಆಲೂರು: ನನ್ನ ಮಣ್ಣು, ನನ್ನ ದೇಶ ಅಭಿಯಾನದ ಮೂಲಕ ತಾಲೂಕಿನಲ್ಲಿ ಇರುವ ಗ್ರಾಪಂಗಳಲ್ಲಿನ ಮಣ್ಣು ಸಂಗ್ರಹಿಸಿ ನೀಡುವ ಮೂಲಕ ಏಕತೆ ಸಾರಲಾಗುತ್ತಿದೆ ಎಂದು ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ದಯಾನಂದ್ ತಿಳಿಸಿದರು.
ಜಿಲ್ಲಾಡಾಳಿತ, ಆಲೂರು ತಾಪಂ, ನೆಹರು ಯುವ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ನಮ್ಮ ಮಣ್ಣು ನಮ್ಮ ದೇಶ ಅಭಿಯಾನದಡಿ ಮಣ್ಣು ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಂದು ಗ್ರಾಮಗಳ ಪವಿತ್ರ ಮಣ್ಣಿನಿಂದ ದೆಹಲಿಯಲ್ಲಿ ಹುತಾತ್ಮರ ಸ್ಮಾರಕ ನಿರ್ಮಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮಣ್ಣು ಕೊಡುವ ಮೂಲಕ ಹುತಾತ್ಮರನ್ನು ನೆನೆಯುವ ಕೆಲಸ ಮಾಡಬೇಕು ಎಂದರು. ದೇಶದ ಉದ್ದಗಲಕ್ಕೂ ಪ್ರತಿ ಪುಣ್ಯ ಕ್ಷೇತ್ರದಿಂದ ಪ್ರತಿ ಮನೆಯಿಂದಲೂ ಮಣ್ಣನ್ನು ಕಳಶದಲ್ಲಿ ಸಂಗ್ರಹಿಸಿ ದೆಹಲಿಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದರು.
ನಿವೃತ್ತ ಸೈನಿಕರಾದ ತಾಲೂಕಿನ ವೆಂಕಟೇಶ್, ಮಂಜುನಾಥ್, ಯೋಗ ರಾಜು, ಅಣೇಗೌಡ, ಪಾಲಕ್ಷ ಅವರನ್ನು ಸನ್ಮಾನಿಸಲಾಯಿತು. ಉದ್ಯೋಗ ಖಾತ್ರಿ ಯೋಜನಾ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಮೋಹನ್‌ಕುಮಾರ್, ಶಿವಪ್ರಸಾದ್, ಆರ್.ವಿ.ಮನು, ಜಿ.ಪುರುಷೋತ್ತಮ ಇದ್ದರು.