

ವಿಜಯವಾಣಿ ಸುದ್ದಿಜಾಲ ಇಂಡಿ
ಸರ್ಕಾರಿ ಶಾಲೆ ಮಕ್ಕಳ ಏಳಿಗೆಗಾಗಿ ಲಕ್ಷ ರೂಪಾಯಿ ಮೌಲ್ಯದ ಪರಿಕರ ನೀಡುವ ಮೂಲಕ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಸಾಫ್ಟವೇರ್ ಇಂಜಿನಿಯರೊಬ್ಬರು ಶೈಕ್ಷಣಿಕ ಕಾಳಜಿ ಮೆರೆದಿದ್ದಾರೆ.
ತಾಂಬಾ ಗ್ರಾಮದ ಪ್ರಕಾಶ ಹತ್ತಿ ಹಾಗೂ ಅನ್ನಪೂರ್ಣ ಹತ್ತಿ ಇವರ ಪುತ್ರಿ ಪ್ರೀತಿ ನಂದೀಶ ಮಂಟೂರ ಇಂಥದ್ದೊಂದು ಕಳಕಳಿ ವ್ಯಕ್ತಪಡಿಸಿರುವ ಉದಾರವಾದಿಗಳು. ಇಂಡಿ ತಾಲೂಕಿನ ಹಿರೇಮಸಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ವಿಜ್ಞಾನ ಪರಿಕರ ಇರಿಸಲು ಅವಶ್ಯಕವಾಗಿ ಫರ್ನಿಚರ್ ಮಾಡಿಸಲು ಲಕ್ಷ ರೂಪಾಯಿ ದೇಣಿಗೆ ನೀಡಿದ್ದು, ಇದೀಗ ವಿಜ್ಞಾನ ಪ್ರಯೋಗಾಲಯಕ್ಕೆ ಬೇಕಾದ ಸಕಲ ಪರಿಕರಗಳನ್ನು ತರಿಸಿ ಪೇರಿಸಿಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿದೆ.
ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಡಾ.ಫ.ಗು. ಹಳಕಟ್ಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಪ್ರೀತಿ ಮಂಟೂರ ಸದ್ಯ ಲಂಡನ್‌ನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುಲ್ಲಿಸುತ್ತಿದ್ದಾರೆ. ಸರಳ -ಸಹೃದಯಿಯಾಗಿರುವ ಪ್ರೀತಿ ಮಂಟೂರ ಸರ್ಕಾರಿ ಶಾಲೆಯ ಮೇಲಿನ ಅಭಿಮಾನದಿಂದ ತಾನು ಆ ಶಾಲೆಯಲ್ಲಿ ಕಲಿಯದಿದ್ದರೂ ಇಂಡಿ ತಾಲೂಕಿನಲ್ಲಿಯೇ 650 ಮಕ್ಕಳ ಸಂಖ್ಯೆ ಹೊಂದಿರುವ ಅತಿ ದೊಡ್ಡ ಮಾದರಿ ಶಾಲೆಯಾದ ಪ್ರಯುಕ್ತ ಸ್ವ ಇಚ್ಛೆಯಿಂದ ದೇಣಿಗೆ ನೀಡಿದ್ದಾರೆ.
ಗುರುವಾರ 78 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿ ವಿಜ್ಞಾನ ಪ್ರಯೋಗಾಲಯದ ಕೋಣೆ ಉದ್ಘಾಟಿಸಲಾಯಿತು.
ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಆರ್.ಬಿ. ಸೌದಾಗರ, ಅಂಬಣ್ಣ ಸುಣಗಾರ ಗುರುಗಳಿಗೂ ಮತ್ತು ವರ್ಗಾವಣೆಗೊಂಡ ಚಿತ್ರಕಲಾ ಶಿಕ್ಷಕ ಪ್ರಕಾಶ ಹೋಳಿನ್ ಅವರಿಗೆ ಸನ್ಮಾನಿಸಲಾಯಿತು. ಮುಖ್ಯ ಗುರು ಆನಂದ ಕೆಂಬಾವಿ ಮತ್ತಿತರರಿದ್ದರು.