

ಬೆಂಗಳೂರು: ಚಿಕ್ಕಮಗಳೂರು, ಹಾಸನ, ಕೊಡಗು ಸೇರಿ ರಾಜ್ಯ ಇತರೆ ಭಾಗಗಳಲ್ಲಿ ನಡೆಯುತ್ತಿರುವ ಆನೆಗಳ ಸಂಘರ್ಷ ತಡೆಗೆ ಸಾಫ್ಟ್ ರಿಲೀಸ್ ಸೆಂಟರ್' ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಬಿಜೆಪಿಯ ಶಾಂತಾರಾಮ ಬುಡ್ನ ಸಿದ್ದಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅರಣ್ಯ ಪ್ರದೇಶದಿಂದ ಬಯಲು ಪ್ರದೇಶಕ್ಕೆ ಆನೆಗಳ ಹಿಂಡು ಬರುತ್ತಿವೆ. ಆನೇಕ ವರ್ಷದಿಂದ ಈ ಸಮಸ್ಯೆ ಕಾಡುತ್ತಿದೆ. ಕಾಡುಪ್ರಾಣಿಗಳ ಹಾವಳಿ ತಡೆಗೆ ಭಾರತೀಯ ವಿಜ್ಞಾನ ಸಂಸ್ಥೆ(ಐಐಸ್ಸಿ) ಸೇರಿ ನಾಲ್ಕು ಸಂಸ್ಥೆಗಳು ಅಧ್ಯಯನ ನಡೆಸಿ ವರದಿ ನೀಡಲಿವೆ. "ಸಾಫ್ಟ್ ರಿಲೀಸ್ ಸೆಂಟರ್' ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ಈ ಬಗ್ಗೆ ಸಿಎಂ ಅವರ ಗಮನಕ್ಕೂ ತರಲಾಗಿದೆ ಎಂದು ಪರಿಷತ್ತಿನಲ್ಲಿ ಸಚಿವರು ಹೇಳಿದರು.
200-300 ಕೋಟಿ ರೂ.ವೆಚ್ಚದಲ್ಲಿ 300 ಕಿ.ಮೀ.ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದೆ. ಇನ್ನೂ 300 ಕಿ.ಮೀ. ನಿರ್ಮಿಸಲು ಆಲೋಚಿಸಲಾಗುತ್ತಿದೆ. ಕಾಡುಪ್ರಾಣಿಗಳಿಂದ ಜೀವ ಕಳೆದುಕೊಳ್ಳುವ ಸಂಖ್ಯೆಯನ್ನು ಶೂನ್ಯಕ್ಕೆ ತರಲು ಆದ್ಯತೆ ನೀಡಲಾಗುವುದು. ಪರಿಣಾಮಕಾರಿಯಾಗಿ ಆನೆಗಳನ್ನು ಕಾರ್ಯಾಚರಣೆ ಮಾಡುವುದಕ್ಕೆ ನಮ್ಮ ಸರ್ಕಾರ ಹೆಚ್ಚಿನ ಒತ್ತು ನೀಡಿದೆ.ಇಲಾಖೆಯಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿ ಮಾಡಲಾಗುತ್ತಿದೆ. 560 ವಾಚರ್ಸ್ಗಳ ನೇಮಕ್ಕೆ ಆರ್ಥಿಕ ಇಲಾಖೆಗೆ ಕಳುಹಿಸಲಾಗಿದ್ದು, ಇದಕ್ಕೆ ಅನುಮೋದನೆ ಸಹ ಸಿಕ್ಕಿದೆ ಎಂದು ಎಂದು ಈಶ್ವರ್ ಖಂಡ್ರೆ ತಿಳಿಸಿದರು. ಇದಕ್ಕೂ ಮುನ್ನ ಜೆಡಿಎಸ್ನ ಭೋಜೇಗೌಡ, ಬಿಜೆಪಿಯ ಕುಶಲಪ್ಪ ಸೇರಿ ಇತರರು ಆನೆ ಹಾವಳಿ ಕುರಿತು ಮಾತನಾಡಿದರು.