

ಅರಸೀಕೆರೆ: ಶೈಕ್ಷಣಿಕ ಕ್ರಾಂತಿಯಿಂದಲೇ ಸಮಾಜ ಸುಧಾರಣೆ ಸಾಧ್ಯ ಎಂದು ಕೋಳಗುಂದ ಕೇದಿಗೆ ಮಠದ ಶ್ರೀ ಜಯಚಂದ್ರಶೇಖರ ಸ್ವಾಮೀಜಿ ಹೇಳಿದರು.
ಜಾವಗಲ್ ಹೋಬಳಿಯ ಕೋಳಗುಂದ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜು ಕೊಠಡಿಗಳ ನಿರ್ಮಾಣಕ್ಕೆ ಆಯೋಜಿಸಿದ್ದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಭವಿಷ್ಯ ಹಸನು ಮಾಡಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ. ಜತೆಗೆ ಉತ್ತಮ, ಸಂಸ್ಕಾರ, ಗುರು, ಹಿರಿಯರಿಗೆ ಗೌರವ ನೀಡುವ ನೈತಿಕ ಬೋಧನೆಗೆ ಶಿಕ್ಷಕರು ಹಾಗೂ ಪಾಲಕರು ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಸರ್ಕಾರದ ವತಿಯಿಂದ ಆರಂಭಿಸಲಾಗಿರುವ ಶಾಲಾ-ಕಾಲೇಜುಗಳಿಗೆ ಪೀಠೋಪಕರಣ, ಕೊಠಡಿ, ಕಲಿಕಾ ಪರಿಕರ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಕೋಳಗುಂದ ಗ್ರಾಮದಲ್ಲಿ 1.25 ಕೋಟಿ ರೂ. ವೆಚ್ಚದಲ್ಲಿ 6 ಸುಸಜ್ಜಿತ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅನ್ಯ ಭಾಷಾ ವ್ಯಾಮೋಹಕ್ಕೆ ಬಲಿಯಾಗದೆ ಪಾಲಕರು ಮಕ್ಕಳನ್ನು ನಗರ ಪ್ರದೇಶಗಳಿಗೆ ಕಳುಹಿಸುವ ಬದಲು ಹಳ್ಳಿಗಳಲ್ಲಿರುವ ಸರ್ಕಾರಿ ಶಾಲಾ-ಕಾಲೇಜುಗಳಿಗೆ ದಾಖಲಿಸಿ ಸರ್ಕಾರದ ಪ್ರಯತ್ನಕ್ಕೆ ಸಹಕಾರ ನೀಡಬೇಕು ಎಂದರು.
ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಹಾಲಿಂಗಯ್ಯ, ಎಇಇ ಬಸವರಾಜ್, ಪ್ರಾಂಶುಪಾಲ ರವಿಕುಮಾರ್, ಮುಖಂಡರಾದ ಪ್ರಸಾದ್, ಸಂತೋಷ್, ಸತೀಶ್ ಇತರರು ಇದ್ದರು.