

ಮೈಸೂರು: ಸಮಾಜದ ಸ್ವಾಸ್ಥ್ಯ ಕೆಟ್ಟು ಹೋಗಿದ್ದು, ಇದಕ್ಕೆ ಔಷಧ ನೀಡಲು ಎಲ್ಲರಿಂದಲೂ ಸಾಧ್ಯವಿಲ್ಲ. ಇದಕ್ಕೆ ಸಮಾಜಶಾಸ್ತ್ರಜ್ಞರ ಅವಶ್ಯಕತೆ ಇದೆ ಎಂದು ಮೈಸೂರು ವಿಶ್ವ ವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ಕೆ.ಎಂ.ಮಹದೇವನ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಸಮಾಜಶಾಸ್ತ್ರ ಅಧ್ಯಾಪಕರ ಸಂಘ ಗುರುವಾರ ಮಾನಸಗಂಗೋತ್ರಿಯ ಇಎಂಎಂಆರ್‌ಸಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಎನ್‌ಇಪಿ-ಯುಜಿ ಪಠ್ಯಕ್ರಮ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಸಮಾಜಶಾಸ್ತ್ರಜ್ಞರ ಸಂಖ್ಯೆ ಕ್ಷೀಣವಾದರೆ ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ. ಸಮಾಜದ ಸ್ವಾಸ್ಥ್ಯ ಹದಗೆಟ್ಟರೆ ಸಮಾಜವೇ ಒಂದು ರೋಗಿಷ್ಠ ಮನೆಯಾಗಿ ಮಾರ್ಪಾಡು ಹೊಂದುತ್ತದೆ. ಅಂತಹ ಸಂದರ್ಭದಲ್ಲಿ ಸಮಾಜದ ಉದ್ಧಾರ ಸಾಧ್ಯವಿಲ್ಲ. ಇದನ್ನು ಮನಗಂಡು ವಿದ್ಯಾರ್ಥಿಗಳು ಯಾವ ರೀತಿಯ ಶಿಕ್ಷಣ ಪಡೆಯಬೇಕು ಎಂಬ ಕುರಿತು ನಾವು ಮಾರ್ಗದರ್ಶನ ನೀಡುವಂತಾಗಬೇಕು ಎಂದರು.
ಕಲಾವಿಭಾಗಕ್ಕೆ ಸ್ಕೋಪ್ ಇಲ್ಲ, ಕೆಲಸ ಸಿಗುವುದಿಲ್ಲ ಎಂಬ ಅಭಿಪ್ರಾಯ ಸಾಮಾನ್ಯವಾಗಿದೆ. ಆದರೆ, ಒಂದು ಸಮಾಜದ ಅಭಿವೃದ್ಧಿಗೆ ಎಲ್ಲ ವರ್ಗದವರ ಅವಶ್ಯಕತೆ ಇದೆ. ಸಮಾಜದಲ್ಲಿ ಎಲ್ಲರೂ ಇದ್ದು ಸಮಾಜಶಾಸ್ತ್ರಜ್ಞರ ಇಲ್ಲವಾದರೆ ಸಮಾಜ ಪರಿಸ್ಥಿತಿ ಹದಗೆಡುತ್ತದೆ. ಹೀಗಾಗಿ ಕಲಾವಿಭಾಗದ ಅವಶ್ಯಕತೆಯನ್ನು ವಿದ್ಯಾರ್ಥಿಗಳಿಗೆ ತಿಳಿಹೇಳಬೇಕು ಎಂದು ಹೇಳಿದರು.
ಸಮಾಜಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಕೆ.ವಿ.ವಿಜಯ್, ವಿಭಾಗದ ಮುಖ್ಯಸ್ಥೆ ಪ್ರೊ.ಎಸ್.ಯಶೋಧಾ, ಮಹಾರಾಣಿ ಕ್ಲಸ್ಟರ್ ವಿಶ್ವ ವಿದ್ಯಾಲಯದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ.ಸಿ.ಜಿ. ಲಕ್ಷ್ಮೀಪತಿ, ಸಮಾಜಶಾಸ್ತ್ರ ಅಧ್ಯಾಪಕರ ಸಂಘದ ಕಾರ್ಯದರ್ಶಿ ರೇಖಾ ಕೆ. ಜಾದವ್ ಹಾಗೂ ಇತರರು ಇದ್ದರು.