ರೇಶನ್‌ ಕಾರ್ಡ್‌ ರದ್ದು ಮಾಡ್ತೀರಾ..? ಗಣತಿ ಮಾಡಲು ಬಂದವರಿಗೆ ಜನರ ಆವಾಜ್‌ !!

Jati Ganati
Published on

ಕಾರವಾರ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅವಽ ಮುಕ್ತಾಯಕ್ಕೆ ಇನ್ನು 6 ದಿನ ಮಾತ್ರ ಬಾಕಿ ಇದೆ. ಬೆರಳೆಣಿಕೆಯ ಸಮೀಕ್ಷಕರು ಮಾತ್ರ ನಿಗದಿತ ಗುರಿ ತಲುಪಿದ್ದಾರೆ. ಉಳಿದವರಿಗೆ ಅಕ್ಟೋಬರ್ 7ರ ವರೆಗೆ ಹೇಗೆ ಗುರಿ ತಲುಪುವುದು ಎಂಬ ಚಿಂತೆ ಶುರುವಾಗಿದೆ. ಇನ್ನೊಂದೆಡೆ ಗಣತಿ ಶುರುವಾಗಿ 10 ದಿನ ಕಳೆದರೂ ಹಲವು ಗೊಂದಲಗಳು ಮುಂದುವರಿದಿವೆ. ತಾಂತ್ರಿಕ ಸಮಸ್ಯೆಗಳು, ಕಾನೂನಾತ್ಮಕ ಗೊಂದಲಗಳಿದ್ದು, ಅವುಗಳನ್ನು ಹೇಳಿಕೊಂಡರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಂದ ಸ್ಪಂದನೆ, ಪರಿಹಾರ ದೊರೆಯುತ್ತಿಲ್ಲ ಎಂಬುದು ಸಮೀಕ್ಷಕರ ಗೋಳು.

ಮೊಬೈಲ್ ಬಳಕೆಯಲ್ಲಿ ಚುರುಕಾಗಿರುವ ಯುವ ಶಿಕ್ಷಕರು ಗುರಿ ತಲುಪಲು ಸಾಧ್ಯವಾಗಿದೆ. ಆದರೆ, ನಿವೃತ್ತಿ ಅಂಚಿನಲ್ಲಿರುವ ಸಾಕಷ್ಟು ಶಿಕ್ಷಕರನ್ನೂ ಈ ಕಾರ್ಯಕ್ಕೆ ನಿಯೋಜಿಸಲಾಗಿದೆ. ಅವರಿಗೆ ಸಾಕಷ್ಟು ತಾಂತ್ರಿಕ ಸಮಸ್ಯೆಗಳು ತಲೆದೋರುತ್ತಿವೆ. ದಿನಕ್ಕೆ ಗರಿಷ್ಠ ನಾಲ್ಕರಿಂದ ಐದು ಮನೆಗಳನ್ನು ಗಣತಿ ಮಾಡಲೂ ಕಷ್ಟ ಪಡುತ್ತಿದ್ದಾರೆ. ಪ್ರತಿ ಗಣತಿದಾರರಿಗೆ 75 ರಿಂದ 150 ಮನೆಗಳನ್ನು ಗಣತಿ ಮಾಡಲು ನೀಡಲಾಗಿದೆ. ಶೇ. 80 ಕ್ಕಿಂತ ಹೆಚ್ಚು ಗಣತಿದಾರರು ತಮಗೆ ನೀಡಿರುವ ಅರ್ಧದಷ್ಟು ಮನೆಗಳನ್ನೂ ಇದುವರೆಗೂ ಗಣತಿ ಮಾಡಿಲ್ಲ. ಅಕ್ಟೋಬರ್ 8 ರಿಂದ ದಸರಾ ರಜೆ ಮುಗಿದು ಶಾಲೆಗಳು ಮರು ಪ್ರಾರಂಭವಾಗಲಿದ್ದು, ಅಷ್ಟರೊಳಗೆ ಸಮೀಕ್ಷೆ ಮುಗಿಸುವುದು ಹೇಗೆ ಎಂಬುದು ಶಿಕ್ಷಕರ ಪ್ರಶ್ನೆ.

ಭಿನ್ನ ವಿಭಿನ್ನ ಸಮಸ್ಯೆ

ಸಾಮಾಜಿಕ ಶೈಕ್ಷಣಿಕ ಗಣತಿಗೆ ಹೋದ ಶಿಕ್ಷಕರಿಗೆ ಭಿನ್ನ, ವಿಭಿನ್ನ ಅನುಭವಗಳು ಉಂಟಾಗುತ್ತಿವೆ. `ಒಂದು ಮನೆಯಲ್ಲಿ ಗಂಡ ಮಾಹಿತಿ ನೀಡಬೇಡ ಎಂದರೆ ಹೆಂಡತಿ ಮಾಹಿತಿ ನೀಡೋಣ ಎನ್ನುತ್ತಿದ್ದಾಳೆ. ನಮ್ಮ ಮುಂದೆಯೇ ಇಬ್ಬರೂ ದೊಡ್ಡ ಜಗಳಕ್ಕೆ ಇಳಿದರು. ನಾನು ಸಮೀಕ್ಷೆ ಮಾಡುವ ಬದಲು ಜಗಳ ಬಿಡಿಸಬೇಕಾಯಿತು. ಕೊನೆಗೆ ನಾನು ಕಣ್ಣೀರು ಹಾಕಿಕೊಂಡು ವಾಪಸಾದೆ' ಎಂದು ಶಿಕ್ಷಕಿಯೊಬ್ಬರು ಗೋಳು ತೋಡಿಕೊಂಡಿದ್ದಾರೆ.

ಇನ್ನೊಬ್ಬ 57 ವರ್ಷದ ಶಿಕ್ಷಕರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ತಮ್ಮ ಪುತ್ರನನ್ನು ಮನೆಗೆ ಕರೆಸಿಕೊಂಡು ಅವನ ಬೈಕ್ ಮೇಲೆ ಶಿರಸಿ ಗ್ರಾಮೀಣ ಭಾಗದಲ್ಲಿ ಗಣತಿಯಲ್ಲಿ ತೊಡಗಿದ್ದಾರೆ. ಹಲವು ಮನೆಗಳಲ್ಲಿ ಕರೆದರೂ ಗೇಟ್ ತೆರೆಯುತ್ತಿಲ್ಲ. ನಾಯಿ ಬೆಲ್ಟ್ ನೋಡಿಕೊಂಡು ವಾಪಸಾಗಬೇಕಾಯಿತು ಎಂದು ಇನ್ನೊಬ್ಬ ಶಿಕ್ಷಕರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.

ಇನ್ನು ಹಲವರಿಗೆ ರೇಶನ್‌ ಕಾರ್ಡ್‌ ಮಾಹಿತಿ ಹಾಕಿದ ತಕ್ಷಣ ಸದಸ್ಯರ ವಯಸ್ಸು 125 ವರ್ಷ ಎಂದು ತೋರಿಸುತ್ತಿದೆ. ಹಲವು ಮನೆಗಳಲ್ಲಿ ಒಬ್ಬರ ಹೆಸರು 125 ವರ್ಷ ಇರುತ್ತಿತ್ತು. ಒಂದು ಮನೆಯಲ್ಲಿ ಎಲ್ಲರಿಗೂ 125 ವರ್ಷವಾಗಿತ್ತು ಎಂದು ಶಿಕ್ಷಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬಗೆಹರಿಯದ ಗೊಂದಲಗಳು:

ಹಲವೆಡೆ ಯುಎಚ್‌ಐಡಿಗಳನ್ನು ಸರಿಯಾಗಿ ಬರೆಯದ ಕಾರಣ ಗಣತಿ ವಿಳಂಬವಾಗುತ್ತಿದೆ. ಇನ್ನು ಕೆಲವೆಡೆ ಯುಎಚ್‌ಐಡಿ ಬರೆದಿದ್ದರೂ ಆ ಮನೆಯವರು ಬೇರೆ ರಾಜ್ಯದವರೋ, ಅಥವಾ ಬೇರೆಡೆ ಮಾಹಿತಿ ನೀಡುತ್ತೇವೆ ಎನ್ನುವವರೋ ಇದ್ದಾರೆ. ಇದರಿಂದ ನಮಗೆ ನೀಡಿರುವ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ ಎಂಬ ಶಿಕ್ಷಕರೂ ಇದ್ದಾರೆ.

ಇನ್ನು ಕೆಲವೆಡೆ ಮೂರ್ನಾಲ್ಕು ರೇಶನ್ ಕಾರ್ಡ್ ಇದ್ದರೂ ಒಂದೇ ಮೀಟರ್ ಇದ್ದು, ಒಂದೇ ಯುಎಚ್‌ಐಡಿ ಅಂಟಿಸಲಾಗಿದೆ. ಇದರಿಂದ ಕೆಲವು ಕುಟುಂಬಗಳು ಗಣತಿಯಿಂದ ತಪ್ಪುತ್ತಿವೆ ಎನ್ನುತ್ತಾರೆ ಶಿಕ್ಷಕರು ಒಟ್ಟಾರೆ, ಗಣತಿ ಗೊಂದಲದ ಗೂಡಾಗಿದೆ. ನಮ್ಮ ಸಮಸ್ಯೆಗಳಿಗೆ ಸ್ಪಂದನೆ ನೀಡುವವರೇ ಇಲ್ಲ ಎನ್ನುತ್ತಾರೆ ಗಣತಿದಾರರು. ಇಡೀ ಊರಿನ ಎಲ್ಲ ಮನೆಗಳನ್ನು ಒಬ್ಬ ಶಿಕ್ಷಕ ಅಥವಾ ಶಿಕ್ಷಕಿಗೆ ಸಮೀಕ್ಷೆಗಾಗಿ ನೀಡಿಲ್ಲ. ಒಂದೇ ಊರಿನ ನಡುವಿನ ಕೆಲವು ಮನೆಗಳ ಸಮೀಕ್ಷೆಯನ್ನು ಬೇರೆ ಗಣತಿದಾರರಿಗೆ ನೀಡಲಾಗಿದೆ. ನಾವು ಅಷ್ಟು ದೂರ ನಡೆದು ಹೋಗಿ ಮನೆ ನಮ್ಮದಲ್ಲ ಎಂದು ವಾಪಸಾಗುವ ಪರಿಸ್ಥಿತಿ ಉಂಟಾಗುತ್ತಿದೆ ಎಂಬುದು ಹಲವು ಶಿಕ್ಷಕರು ಗೋಳು.

ಕೆಲವು ತಾಲೂಕುಗಳಲ್ಲಿ ಆಯಾ ಗಣತಿದಾರರಿಗೆ ಎಷ್ಟು ಮನೆಗಳು ಬರುತ್ತವೆ ಎಂಬ ಪಟ್ಟಿ ನೀಡಲಾಗಿದೆ. ಆದರೆ, ಕೆಲವು ತಾಲೂಕುಗಳಲ್ಲಿ ಪಟ್ಟಿಯನ್ನೂ ನೀಡಿಲ್ಲ. ಇದರಿಂದ ಮನೆ ಹುಡುಕುವುದೇ ಕಷ್ಟವಾಗಿದೆ. ಗೂಗಲ್ ಮ್ಯಾಪ್ ಸರಿಯಾದ ದಾರಿ ತೋರಿಸುತ್ತಿಲ್ಲ ಎಂಬುದು ಇನ್ನಷ್ಟು ಶಿಕ್ಷಕರ ಗೋಳು.

ರೇಶನ್ ಕಾರ್ಡ್ ರದ್ದು ಮಾಡ್ತೀರಾ..?

ಮಿತಿಗಿಂತ ಹೆಚ್ಚು ಆದಾಯ ಹೊಂದಿರುವ ಬಿಪಿಎಲ್ ಕಾರ್ಡ್ಗಳನ್ನು ಪತ್ತೆ ಮಾಡಿ, ಅಂಥ ಕುಟುಂಬಗಳಿಗೆ ನೋಟಿಸ್ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಸಾಮಾಜಿಕ ಶೈಕ್ಷಣಿಕ ಗಣತಿದಾರರು ಮನೆಗೆ ಹೋಗಿ ವೈಯಕ್ತಿಕ ಮಾಹಿತಿ ಕೇಳಿದಾಗ ಇವರು ರೇಶನ್ ಕಾರ್ಡ್ ರದ್ದತಿಗೇ ಬಂದಿದ್ದಾರೆ ಎಂದು ತಿಳಿದು ಹಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕೆಲವರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಶಿಕ್ಷಕರೊಬ್ಬರು ತಮ್ಮ ಕಹಿ ಅನುಭವ ಹಂಚಿಕೊಂಡರು.

ವೆಬ್‌ಸೈಟ್ ಮೂಲಕ ನಮ್ಮ ಮಾಹಿತಿಗಳನ್ನು ಸ್ವಯಂ ಘೋಷಣೆ ಮಾಡಿಕೊಂಡು ಸಾಮಾಜಿಕ ಶೈಕ್ಷಣಿಕ ಗಣತಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಗಣತಿದಾರರು ತಮ್ಮ ಮನೆ ಬಾಗಿಲಿಗೆ ಬರುವವರೆಗೆ ನಿರೀಕ್ಷಿಸದೇ ವೆಬ್ನ‌ ಸೈಟ್‌ ನಲ್ಲಿ  ತಮ್ಮ ವಿವರ ದಾಖಲಿಸಬಹುದು. ಈ ಬಗ್ಗೆ ಇತರರಿಗೂ ತಿಳಿಸಬೇಕು.

ಸಾಜಿದ್ ಮುಲ್ಲಾ

ಅಪರ ಜಿಲ್ಲಾಧಿಕಾರಿ, ಉತ್ತರ ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net