

ಗುತ್ತಲ: ಸಮಾಜಮುಖಿ ಕಾರ್ಯಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದವರಿಗೆ ಸಮಾಜ ಯಾವತ್ತು ಋಣಿಯಾಗಿರುತ್ತದೆ ಎಂದು ನೆಗಳೂರ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ನಿವೃತ್ತ ಶಿಕ್ಷಕ ಫಾಲಾಕ್ಷಯ್ಯ ನೆಗಳೂರಮಠ ಅವರ ಅಭಿನಂದನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಕಳೆದ ತಿಂಗಳು ಸೇವಾ ನಿವೃತ್ತಿಯಾದ ಫಾಲಾಕ್ಷಯ್ಯ ನೆಗಳೂರಮಠ 41 ವರ್ಷಗಳ ಕಾಲ ಚಿತ್ರಕಲಾ ಶಿಕ್ಷಕರಾಗಿ ಕತ್ತೆಬೆನ್ನೂರ ಗ್ರಾಮದಲ್ಲಿ ಸೇವೆ ಸಲ್ಲಿಸಿ, ಅಲ್ಲಿನ ಸಾವಿರಾರು ಶಿಷ್ಯ ಬಳಗಕ್ಕೆ ಸ್ಪೂರ್ತಿಯ ಸೆಲೆಯಾಗಿದ್ದರು. ಅನೇಕ ಬಡಮಕ್ಕಳ ಶಿಕ್ಷಣದ ಶುಲ್ಕವನ್ನು ಸ್ವಂತ ಹಣದಲ್ಲಿ ಕಟ್ಟಿರುವುದು ಫಾಲಾಕ್ಷಯ್ಯನವರ ನಿಸ್ವಾರ್ಥ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ. ಅವರ ಇಡೀ ಕುಟುಂಬ ಕಲಾಸೇವೆಯಲ್ಲಿ ತೊಡಗಿದ್ದು, ಅನೇಕರಿಗೆ ಅನ್ನ ಹಾಗೂ ಅಕ್ಷರ ನೀಡಿದ ಶ್ರೇಯಸ್ಸು ಅವರ ಕುಟುಂಬಕ್ಕೆ ಸಲ್ಲುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಜಂಗಮಕ್ಷೇತ್ರ ಲಿಂಗನಾಯಕಹಳ್ಳಿಯ ಶ್ರೀ ಚನ್ನವೀರ ಸ್ವಾಮೀಜಿ ಮಾತನಾಡಿ, ವಯೋನಿವೃತ್ತಿ ಹೊಂದಿದ್ದರೂ 6 ವರ್ಷದ ಮುಗ್ಧ ಮನಸಿನ ಮಗುವಿನಂತೆ ಎಲ್ಲರ ಪ್ರೀತಿಯ ಪಾತ್ರರಾಗಿದ್ದಾರೆ. ಫಾಲಾಕ್ಷಯ್ಯನವರು ಗಣೇಶನ ವಿಗ್ರಹ ತಯಾರಿಕೆ ಕರಗತ ಮಾಡಿಕೊಂಡಿದ್ದಾರೆ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.
ತಹಸೀಲ್ದಾರ್ ಶಂಕರ ಜಿ.ಎಸ್. ಮಾತನಾಡಿ, ಶಾಲಾ ಶುಲ್ಕ ನೀಡಿದ ಫಾಲಾಕ್ಷಯ್ಯ ನೆಗಳೂರಮಠ ಅವರಿಂದ ಬಡ ಕುಟುಂಬದ ನನಗೆ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ನನ್ನಂತೆ ಅನೇಕರಿಗೆ ನೆಗಳೂರಮಠ ದಾರಿದೀಪವಾಗಿದ್ದಾರೆ. ಅವರ ಜೀವನ ಆದರ್ಶಗಳು ನಮಗೆಲ್ಲ ಮಾರ್ಗದರ್ಶಿಯಾಗಿವೆ ಎಂದರು.
ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಪಂ ಮಾಜಿ ಸದಸ್ಯ ಸಿ.ಬಿ. ಕುರವತ್ತಿಗೌಡರ, ಕೊಟ್ರಯ್ಯಸ್ವಾಮಿ ಕೋವಳ್ಳಿಮಠ, ಸಂಗಯ್ಯಸ್ವಾಮಿ ಭೂಸನೂರಮಠ, ಬಸವರಾಜ ಕೆಂಚಮಲ್ಲ, ಪಪಂ ಸದಸ್ಯರಾದ ಪ್ರದೀಪ ಸಾಲಗೇರಿ, ಮಹ್ಮದಹನೀಫ ರಿತ್ತಿ, ಚನ್ನಪ್ಪ ಕಲಾಲ, ಶಿವಕುಮಾರಸ್ವಾಮಿ ನೆಗಳೂರಮಠ, ಗೌರಿಶಂಕರಸ್ವಾಮಿ ನೆಗಳೂರಮಠ, ಚಿದಾನಂದಯ್ಯ ಹಿರೇಮಠ, ಪ್ರಕಾಶ ಚಕ್ಕಿ, ಕೃಷ್ಣಾಜಿ ತೇಲ್ಕರ, ನೀಲಕಂಠಯ್ಯ ಓದಿಸೋಮಠ, ಮೃತ್ಯುಂಜಯ ರಿತ್ತಿಮಠ, ಶಿವಬಸವ ಬನ್ನಿಮಟ್ಟಿ, ಬಿಂದಪ್ಪ ಅರ್ಕಸಾಲಿ, ಪ್ರಕಾಶ ಸೊಪ್ಪಿನ, ರಾಮಣ್ಣ ಮರಾಠಿ, ಜಗದೇವಯ್ಯ ಕೂಡಲಮಠ, ಪ್ರಾಚಾರ್ಯ ಮಹಾಂತ ಕುರವತ್ತಿಗೌಡರ, ವಸಂತ ಲಂಗೋಟಿ, ಗುಡ್ಡಪ್ಪ ಗೊರವರ, ಲಿಂಗರಾಜ ನಾಯಕ, ವಿನೋದ ಗುತ್ತಲ, ಸಂತೋಷ ಲಮಾಣಿ, ವಿಎಸ್ಎಸ್ ನಿರ್ದೇಶಕರಾದ ಚನ್ನಪ್ಪ ಬನ್ನಿಮಟ್ಟಿ, ಶಿವಾನಂದ ಕೆಂಚಮಲ್ಲ, ಸುರೇಶ(ಮಾಲತೇಶ) ಬನ್ನಿಮಟ್ಟಿ, ವಿಕಾಶ ಹಿರೇಮಠ ಸೇರಿದಂತೆ ಅನೇಕರಿದ್ದರು.
ಹುಬ್ಬಳ್ಳಿಯ ಕಸವಿ ಚಂದ್ರಕುಮಾರ ಗಾಣಗೇರ ಅವರ ಭರತ ನಾಟ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ವೀರಯ್ಯ ಪ್ರಸಾದಿಮಠ ಸ್ವಾಗತಿಸಿದರು. ವಿ.ಎಂ. ಗಡ್ಡದೇವರಮಠ ಪ್ರಸ್ತಾವಿಕವಾಗಿ ಮಾತನಾಡಿದರು. ಎಂ.ಬಿ. ಕೋಡಬಾಳ ನಿರೂಪಿಸಿದರು. ಮುರುಳಿ ಆಚಾರ್ಯ ವಂದಿಸಿದರು. ಸ್ವಾಮಿ ಕರೋಕೆ ತಂಡದ ಸದಸ್ಯರು ಸಂಗೀತ ನೀಡಿದರು.