

ಹೊಸದುರ್ಗ: ಅನ್ಯ ಭಾಷಿಗರಿಗೆ ಕನ್ನಡವನ್ನು ಕಲಿಸುವಂತಹ ಕೆಲಸಗಳು ನಡೆಯಬೇಕಿದೆ. ಆಗ ಮಾತ್ರ ಕನ್ನಡ ಭಾಷೆ ಮತ್ತಷ್ಟು ಉತ್ತುಂಗಕ್ಕೇರಲಿದೆ ಎಂದು ಸಮಾಜ ಸೇವಕ ದಿಲ್ಸೆ ದಿಲೀಪ್ ಗುರುಸ್ವಾಮಿ ಹೇಳಿದರು.
ನಗರದ ಗಾಂಧಿ ವೃತ್ತದ ಗೆಳೆಯರ ಬಳಗದ ವತಿಯಿಂದ ಬುಧವಾರ ನಡೆದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಭಾಷೆಯನ್ನು ಬೆಳೆಸುವ ಹಾಗೂ ಉಳಿಸುವ ಬದಲು ಬಳಸಬೇಕು. ಎಲ್ಲರೂ ಕನ್ನಡದಲ್ಲಿ ಮಾತನಾಡಿದರೆ ಭಾಷೆ ಉಳಿದು, ಬೆಳೆಯುತ್ತದೆ ಎಂದು ತಿಳಿಸಿದರು.
ಕನ್ನಡ ಭಾಷೆಯನ್ನು ಬೆಳೆಸುವ ಶಕ್ತಿ ಯಾರಿಗೂ ಇಲ್ಲ. ಅದಾಗಲೇ ಹೆಮ್ಮರವಾಗಿ ಬೆಳೆದಿದೆ. ಭಾಷೆಯನ್ನು ಉಳಿಸುವಂತಹ ಮಹಾತ್ಮರು ಇಲ್ಲಿ ಯಾರೂ ಇಲ್ಲ.
ಕನ್ನಡದ ಬಳಕೆ ಹೆಚ್ಚಾಗಬೇಕು ಇದರಿಂದ ಭಾಷೆಯ ಉಳಿವು ಜೀವಂತವಾಗಿರಲಿದೆ. ತಾಲೂಕಿನಲ್ಲಿ ಕನ್ನಡದ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದರು.
ಬೆಳಗ್ಗೆ 11 ರಿಂದ ರಾತ್ರಿ 10 ಗಂಟೆ ವರೆಗೆ ರಸಮಂಜರಿ ಸೇರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಉದ್ಯಮಿ ಗೋಪಾಲ್, ಗುರು ಸಿರಿವಂತ್, ಮಹಿಳಾ ಕನ್ನಡ ಸಂಘದ ಅಧ್ಯಕ್ಷೆ ಸಾವಿತ್ರಮ್ಮ ಇತರರಿದ್ದರು.