

ಶಿರಸಿ: ಸಂಯಮಿ, ಸಾಧಕ, ರಾಷ್ಟ್ರ ಪ್ರಜ್ಞೆಯುಳ್ಳ ಯುವಕರ ಅವಶ್ಯಕತೆ ಸಮಾಜಕ್ಕಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ನುಡಿದರು.
ನಗರದ ಎಂ ಇ ಎಸ್ ವಾಣಿಜ್ಯ ಕಾಲೇಜಿನಲ್ಲಿ ಯುವ ಪರಿಷತ್ ಸ್ವರ್ಣವಲ್ಲಿ ಮಹಾಸಂಸ್ಥಾನ ಆಯೋಜಿಸಿದ್ದ ಸ್ವಸ್ಥ ಸಮಾಜದತ್ತ ಯುವಜನತೆಯ ಚಿತ್ತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಈಗೀನ ಸಮಾಜದಲ್ಲಿ ಪ್ರಾಚೀನ ಮೌಲ್ಯ ಕುಸಿಯುತ್ತಿದೆ. ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಯುವ ಸಮಾಜ ಆಕರ್ಷಣೆಗೆ , ವ್ಯಸನಗಳಿಗೆ ಬಲಿಯಾಗುತ್ತಿದೆ. ಕಾಲೇಜುಗಳಲ್ಲಿನ ವಾತಾವರಣವೇ ವಿಚಿತ್ರವಾಗುತ್ತಿದೆ.
ದಾರಿ ತಪ್ಪುತ್ತಿರುವ ಯುವ ಸಮಾಜವನ್ನು ಸರಿದಾರಿಗೆ ತರುವ ಪ್ರಯತ್ನವನ್ನು ಸ್ವರ್ಣವಲ್ಲೀ ಮಹಾಸಂಸ್ಥಾನ ಮಾಡುತ್ತಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಯೋಗವನ್ನು ನಾವು ಹವ್ಯಾಸವನ್ನಾಗಿ ರೂಢಿಸಿಕೊಳ್ಳಬೇಕು. ಸ್ವಸ್ಥ ಶರೀರಕ್ಕೆ ಯೋಗ ಅತಿಮುಖ್ಯ ವಾಗಿದೆ ಎಂದರು.
ಹಿರಿಯ ಪೊಲೀಸ್ ಅಧಿಕಾರಿ ಸುಧೀರ ಹೆಗಡೆ ಮಾತನಾಡಿ, ಸ್ವಸ್ಥ ಸಮಾಜದತ್ತ ಯುವ ಜನತೆ ಅತ್ಯುತ್ತಮ ಕಲ್ಪನೆ ಯಾಗಿದೆ. ಯುವಕರು ಮೊಬೈಲ್ ಬಳಕೆಯನ್ನು ಚಟವಾಗಿಸಿಕೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಮಾದಕ ದ್ರವ್ಯದ ಸೇವನೆ,ದುಷ್ಟರ ಸಹವಾಸ, ಅಜಾಗರೂಕತೆ, ಆಲಸಿತನವನ್ನು ಬಿಟ್ಟು ಸಾಧನೆಯತ್ತ ನಾವು ಮುಖ ಮಾಡಬೇಕು ಎಂದರು.
ಶಿರಸಿಪೊಲೀಸ್ ಉಪಾಧೀಕ್ಷಕ ಗಣೇಶ ಕೆ.ಎಲ್., ಜಿ.ಎಂ.ಹೆಗಡೆ ಮುಳಖಂಡ, ವರೇಂದ್ರ ಕಾಮತ್, ಎಸ್ಕೆ.ಹೆಗಡೆ, ಅನಂತಮೂರ್ತಿ ಭಟ್ಟ, ಸ್ವಯಂ ಸಂಸ್ಥೆಯ ಆರ್.ಎಸ್.ಹೆಗಡೆ, ಯುವ ಪರಿಷತ್ ಸಂಚಾಲಕ ವಿನಾಯಕ ಹೆಗಡೆ ಹುಳಗೋಳ, ಗುರುಪ್ರಸಾದ ಭಟ್ಟ, ಗಣೇಶ ಹೆಗಡೆ ಇತರರು ಇದ್ದರು.