

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡದ ಸಮಾಜ ಪುಸ್ತಕಾಲಯವು ಕನ್ನಡ ಪ್ರಕಟಣಾ ಪ್ರಪಂಚಕ್ಕೆ ಭದ್ರ ಬುನಾದಿ ಹಾಕಿದ ಈ ನಾಡಿನ ಹೆಮ್ಮೆಯ ಸಂಸ್ಥೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಶುಕ್ರವಾರ ಏರ್ಪಡಿಸಿದ್ದ ದಿ. ಭಾಲಚಂದ್ರ ಘಾಣೇಕರ ದತ್ತಿ ಕಾರ್ಯಕ್ರಮದಲ್ಲಿ ಭಾಲಚಂದ್ರ ಘಾಣೇಕರ್ ಹೋರಾಟದ ಬದುಕು ವಿಷಯ ಅವರು ಉಪನ್ಯಾಸ ನೀಡಿದರು.
ಲೇಖಕರು, ಪ್ರಕಾಶಕರು, ಮುದ್ರಕರೂ ಆದ ಭಾಲಚಂದ್ರ ಅವರದ್ದು ಸ್ವಾಭಿಮಾನ, ಹೋರಾಟದ ಬದುಕು. ಜೀವನದಲ್ಲಿ ಎಂತಹ ಗಂಭೀರ ಸಮಸ್ಯೆಗಳು ಎದುರಾದರೂ ಬದುಕಿನಲ್ಲಿ ಎಂದೂ ಬಡತನ ಪ್ರದರ್ಶಿಸದ ಪುಣ್ಯ ಪುರುಷರು. 1935ರಲ್ಲಿ ಸ್ಥಾಪಿಸಿದ ಸಮಾಜ ಪುಸ್ತಕಾಲಯ ಪ್ರಕಟಣೆ, ಪ್ರಕಾಶನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ನಾಡಿನ ಹಿರಿಯ ಸಂಸ್ಥೆ. ಧಾರವಾಡ ವಿದ್ಯಾಕಾಶಿ, ಸಾಂಸ್ಕೃತಿಕ ರಾಜಧಾನಿ ಎಂಬ ಹಿರಿಮೆಗೆ ಸಮಾಜ ಪುಸ್ತಕಾಲಯದ ಕೊಡುಗೆ ಅನನ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಭಾಲಚಂದ್ರ ಘಾಣೇಕರ ಎಲ್ಲರಿಗೂ ಪ್ರಾತಃ ಸ್ಮರಣೀಯರು. ಪುಸ್ತಕ ಪ್ರಪಂಚಕ್ಕೆ ಅವರ ಸೇವೆ ಅನನ್ಯವಾದದ್ದು ಎಂದರು.
ನಿಂಗಣ್ಣ ಕುಂಟಿ, ಎಂ.ಎಂ. ಚಿಕ್ಕಮಠ, ಮಹಾಂತೇಶ ನರೇಗಲ್, ನಿಂಗಪ್ಪ ಮಾಯಕೊಂಡ, ಚಂದ್ರಶೇಖರ ಅಮೀನಗಡ, ಘಾಣೇಕರ ಕುಟುಂಬಸ್ಥರು, ಇತರರು ಇದ್ದರು. ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.